ಬೆಂಗಳೂರು :– ರಾಜ್ಯಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದ 722 ಮಾದರಿಯಲ್ಲಿ 44 ಮಂದಿಯಲ್ಲಿ ಸೋಂಕು ಧೃಢವಾಗಿದೆ
ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಅವರಲ್ಲಿ 62 ಸೋಂಕಿತರು ಹೋಮ್ ಐಸೋಲೇಶನ್ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಮಂದಿಯಲ್ಲಿ 6 ಮಂದಿ ಐಸಿಯು ಹಾಗೂ 11ಮಂದಿ ಜನರಲ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ತೀವ್ರತೆ ಕಡಿಮೆಯಿದ್ದರೂ, ಸೋಂಕು ಹರಡುವ ಪ್ರಮಾಣ ಒಮಿಕ್ರಾನ್ಗಿಂತ ಅಧಿಕವಾಗಿರಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೊರೊನಾ ಉಪತಳಿ ಜೆಎನ್-1 ವೈರಸ್ನ ಹರಡುವಿಕೆ ನವೆಂಬರ್ನಲ್ಲಿ ಶೇ. 10ರಷ್ಟು ಇತ್ತು. ಡಿಸೆಂಬರ್ ಎರಡನೇ ವಾರದ ವೇಳೆ ಶೇ. 30 ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಸೋಂಕಿನ ತೀವ್ರತೆ ಹಾಗೂ ಹರಡುವಿಕೆ ವೇಗವನ್ನು ಅಂದಾಜು ಮಾಡಬಹುದಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂದಾಜಿಸಿದೆ.
ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್-1ಗೆ ನಾಲ್ವರು ಸಾವಿಗೀಡಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಹಲವು ಮುಂಜಾಗ್ರತ ಕ್ರಮಗಳ ಜತೆಗೆ ರಾಜ್ಯದಲ್ಲಿ ಬುಧವಾರದಿಂದಲೇ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಲು ಮುಂದಾಗಿದೆ.
ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ಪ್ರತ್ಯೇಕವಾಗಿ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಮುಂದಿನ 2 ದಿನದಲ್ಲಿ 500ರಿಂದ 1000 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದೆ. ಮುಂದಿನ ಒಂದು ವಾರದೊಳಗೆ ಕನಿಷ್ಠ 5,000 ಮಾದರಿಯನ್ನು ಪರೀಕ್ಷೆ ಮಾಡುವ ಗುರಿ ಇದೆ. ವಿಶೇಷವಾಗಿ ಬೇರೆ ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಪ್ರತೀ ದಿನ 5,000 ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಿದೆ. ಇದರಿಂದ ಮುಂದಿನ ಶುಕ್ರವಾರದೊಳಗೆ ಪ್ರಕರಣಗಳ ಹರಡುವಿಕೆ ವೇಗವನ್ನು ಅಂದಾಜಿಸಲು ಸಾಧ್ಯವಿದೆ ಎನ್ನುವುದು ಇಲಾಖೆ ಲೆಕ್ಕಾಚಾರವಾಗಿದೆ.
ನವೆಂಬರ್ನಲ್ಲಿಯೇ ಏರಿಕೆ?
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನವೆಂಬರ್ ಮೊದಲ ಎರಡು ವಾರದಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದೆ. ಕಳೆದ ಆಗಸ್ಟ್ ಅಂತ್ಯಕ್ಕೆ ದಿನವೊಂದಕ್ಕೆ 2,600 ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಒಂದರಿಂದ 3 ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ನ. 4 ರಿಂದ 10ರ ವರೆಗೆ 2,307 ಮಾದರಿಯನ್ನು ಪರೀಕ್ಷಿಸಿದಾಗ, 42 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ನ. 11ರಿಂದ 17ರ ವರೆಗೆ 2,619 ಮಂದಿಯನ್ನು ಪರೀಕ್ಷಿಸಿದ್ದು 81 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 44 ಪಾಸಿಟಿವ್ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಕಣ್ಗಾವಲು ಪಡೆ ಬಿಡುಗಡೆಗೊಳಿಸಿ ವರದಿ ದೃಢಪಡಿಸಿದೆ.