ನವದೆಹಲಿ, ಡಿ. 20: ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ, ಮೆಟ್ರೋ ಸಂಪರ್ಕ ವಿಸ್ತರಣೆ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಅನುಮತಿ ಹಾಗೂ ಹಣಕಾಸಿನ ನೆರವು ಕೋರಿದರು.
ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಸಹಕಾರ ಕೋರಿದರು. ಕೇಂದ್ರ ಸಚಿವರಿಗೆ ಉಪಮುಖ್ಯಮಂತ್ರಿಗಳು ನೀಡಿದ ಮನವಿ ಪತ್ರದ ಸಾರಾಂಶ ಹೀಗಿದೆ:
ಬೆಂಗಳೂರಿನ ಮೂರು ಯೋಜನೆಗಳಿಗೆ ನೆರವು:
ಟನಲ್ ರಸ್ತೆ
ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು 60 ಕಿ.ಮೀ ಉದ್ದದ ನಗರ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಗರದೊಳಗೆ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಕಾರಿಡಾರ್ ಮೂಲಕ ನಗರದೊಳಗಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಈ ಯೋಜನೆಯಲ್ಲಿ ಪ್ರತಿ ಕಿ.ಮೀ ಸುರಂಗ ರಸ್ತೆಗೆ 500 ಕೋಟಿ ರೂ.ನಂತೆ ಒಟ್ಟು 30 ಸಾವಿರ ಕೋಟಿ ವೆಚ್ಚ ತಗುಲುವ ಅಂದಾಜು ಮಾಡಲಾಗಿದೆ. ಈ ಯೋಜನೆಗಳು ರಾಷ್ಟ್ರೀಯ ಹೆದ್ದಾರಿ 7 ಮತ್ತು 4ರ ಸಂಪರ್ಕ ಸಾಧಿಸುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನುದಾನ ಮೀಸಲಿಡಬೇಕು.