ಬೆಂಗಳೂರು: ಹೋದ್ಯಲ್ಲಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗೇ ಆಗಿದೆ ಕೊರೋನಾ ಕಥೆ. ಅದ್ಯಾಕೋ ಕೊರೊನಾ ಬಿಟ್ಟು ಹೋಗೋ ಲಕ್ಷಣಗಳೇ ಕಾಣ್ತಿಲ್ಲ. ಕಂಟ್ರೋಲ್ ಇಲ್ಲದೇ ಓಡಿ ದಿಢೀರ್ ಅಂತ ತೆರೆಮರೆಗೆ ಸರಿದಿದ್ದ ವೈರಸ್ ಮತ್ತೆ ಕಾಟ ಕೊಡೋಕೆ ಎಂಟ್ರಿ ಬಂದಿದೆ. ಇಡೀ ರಾಜ್ಯದಲ್ಲೇ ಬೆಂಗಳೂರುನ್ನ ಟಾರ್ಗೆಟ್ ಮಾಡಿರೋ ಕೊರೋನಾ ಅನ್ನೋ ಕ್ರಿಮಿ ಆಟ ಆಡೋಕೆ ಶುರುಮಾಡಿರೋದು ಪಾಲಿಕೆಗೆ ನಿದ್ದೆಗೆಡಿಸಿದೆ…ಕೊರೊನಾ ಏರಿಕೆ ಯಿಂದ ತಲೆಕೆಡಿಸಿಕೊಂಡಿರುವ ಬಿಬಿಎಂಪಿ ಮತ್ತೆ ಇಂದಿನಿಂದ ಕೋವಿಡ್ ಟೆಸ್ಟಿಂಗ್ ಮಾಡ್ತಿದೆ.
ಕೊರೊನಾ ಮತ್ತೆ ರಿಟರ್ನ್ ಆಗಿದೆ. ಮೊದಲೆರೆಡು ಅಲೆಗಳಲ್ಲಿ ಬದುಕಿಗೆ ಕೊಳ್ಳಿ ಇಟ್ಟಿದ್ದ ಕೋವಿಡ್, ಈಗ ಮಾರುವೇಷ ತೊಟ್ಟು ಮತ್ತೊಮ್ಮೆ ಅಗೋಚರ ಯುದ್ಧ ಸಾರಿದೆ. ಮಾಯಾವಿಯ ಈ ಹೊಸ ರೂಪಾಂತರಿ ಅವತಾರ ಮತ್ತೆ ಚಿಂತೆಗೆ ದೂಡಿದೆ. ಈ ಬಾರಿ JN1 ಹೆಸರು ಹೊತ್ತು ಬಂದ ರೂಪಾಂತರಿ ಉಳಿದೆಲ್ಲಕ್ಕಿಂತ ಕ್ರೂರಿ ಅಂತ ಹೇಳಲಾಗ್ತಿದೆ. ಹೀಗಾಗಿ ಆರಂಭದಲ್ಲೇ ಅಲರ್ಟ್ ಆಗಿರೋ ಬಿಬಿಎಂಪಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ.
ಕಳೆದ ಎರಡು ವರ್ಷದಿಂದ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದ್ದವು. ಬಿಬಿಎಂಪಿ ಕೂಡ ಸೋಂಕಿತ ಸಂಖ್ಯೆ ಕಡಿಮೆ ಇದ್ದ ಕಾರಣದಿಂದ ಕೋವಿಡ್ ಟೆಸ್ಟಿಂಗ್ ಮಾಡಿರಲಿಲ್ಲ. ಆದ್ರೆ ಕೇರಳದಲ್ಲಿ ಕೊರೊನಾ ಅರ್ಭಟದ ಬೆನ್ನಲ್ಲೇ ಮತ್ತೆ ಟೆಸ್ಟಿಂಗ್ ಮಾಡೋಕೆ ಮುಂದಾಗಿದೆ. ಇವತ್ತಿನಿಂದ ಪಾಲಿಕೆ ಸಿಬ್ಬಂದಿ ಆರೋಗ್ಯ ಕೇಂದ್ರಗಳಲ್ಲಿ ಪಿಪಿಇ ಕಿಟ್, ಗ್ಲೌಸ್ , ಮಾಸ್ಕ್ ಧರಸಿ ಫೀಲ್ಡ್ಗಿಳಿದ್ರು. ನಗರದ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ಕಾರ್ಯ ಶುರು ಮಾಡಿದರು
ಇನ್ನೂ ನಗರದಕ್ಕೆ ಮಾರುವೇಷದಲ್ಲಿ ಕೊರೊನಾ ದಾಂಗುಡಿ ಇಟ್ಟಿದೆ. ಸೋಂಕಿನ ಸುನಾಮಿ ಎಬ್ಬಿಸಲು ಹೊಂಚು ಹಾಕಿ ಕೂತಿರುವ ಮಹಾಮಾರಿ, ಶರವೇಗದಲ್ಲಿ ದೇಹ ಪ್ರವೇಶಿಸಲು ಹಾತೊರೆಯುತ್ತಿದೆ. ನಗರದಲ್ಲೂ ಆತಂಕದ ಕಾರ್ಮೋಡ ಕವಿದಿದೆ. ಕಳೆದ 20 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 17 ಹೊಸ ಕೇಸ್ ಗಳು ದಾಖಲಾಗಿವೆ. ಬಿಬಿಎಂಪಿ ಪೂರ್ವ – ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ಕೇಸ್ ಗಳು ಪತ್ತೆಯಾಗಿರೋದ ಹೆಚ್ಚು ಆತಂಕ ಹೆಚ್ಚಿಸಿದೆ.
ನಗರದಲ್ಲಿ ಸೋಂಕು ಹೆಚ್ಚಳ ಬೆನ್ನಲ್ಲೇ ಶಾಲಾ ಮಕ್ಕಳು – ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಇದರಿಂದ ಅಲರ್ಟ್ ಆಗಿರೋ ಖಾಸಗಿ ಶಾಲೆಗಳ ಒಕ್ಕೂಟ ಹೊಸ ಗೈಡ್ಲೈನ್ ಬಿಡುಗಡೆ ಮಾಡಿದೆ. ಆರೋಗ್ಯ ಸಮಸ್ಯೆ ಇರುವ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಬರಬೇಕು. ಅನಾರೋಗ್ಯದ ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಶಾಲೆಗೆ ಎಂಟ್ರಿ ಆಗುವ ಮಕ್ಕಳ ದೇಹದ ಉಷ್ಣಾಂಶ ಪರಿಶೀಲಿಸಿ ಶಾಲೆಯ ಆವರಣ ಸ್ಯಾನಿಟೈಸ್ ಮಾಡಿ ಸ್ವಚ್ಚಗೊಳಿಸಬೇಕೆಂದು ಕ್ಯಾಮ್ಸ್ ಖಾಸಗಿ ಶಾಲಾ ಒಕ್ಕೂಟ ಮಾರ್ಗಸೂಚಿ ಬಿಡುಗಡೆ ಮಾಡಿದೆ
ಒಟ್ಟಿನಲ್ಲಿ ನಗರದಲ್ಲಿ ಕೊರೋನಾ ಕಾಲ ಮುಗಿದೋಯ್ತು ಅನ್ನೋ ವೇಳೆಗೆ ಮತ್ತೆ ಮಾಹಾಮಾರಿಯ ಆತಂಕ ದಿನದಿನಕ್ಕೂ ಹೆಚ್ಚಿಸಿದೆ.. ಅತ್ತ ಜನ ಸಹ ಕೊರೋನಾ ಎಲ್ಲಾ ಮಾಮೂಲು ಅನ್ನೋ ಮನಸ್ಥಿತಿಗೆ ಬಂದಿದ್ದು ಕೋವಿಡ್ ಅನ್ನು ನೆಗ್ಲೆಟ್ ಮಾಡಲಾರಂಭಿಸಿದ್ದಾರೆ. ಜನರ ಈ ವರ್ತನೆ ಸರ್ಕಾರಕ್ಕೆ ತಲೆನೋವಾಗಿದ್ದು ಅನಿವಾರ್ಯವಾದ್ರೆ ಮತ್ತೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನಿಸಿದೆ.