ಬೆಂಗಳೂರು:-– ಕೋವಿಡ್ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯ ಕಾರ್ಯಯೋಜನೆ ಹಮ್ಮಿಕೊಳ್ಳಲು ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧಾರ ಮಾಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ನಗರದಲ್ಲಿ 136 ಸಂಚಾರಿ ಸಿಗ್ನಲ್ ವ್ಯವಸ್ಥೆ ಉನ್ನತೀಕರಿಸಲು ಮತ್ತು ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣ ಅಳವಡಿಸಿ ಸಿಂಕ್ರೋನೈಸೇಶನ್ ಮಾಡಲು ಹಾಗೂ 165 ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣ ಘಟಕಗಳನ್ನು 5 ವರ್ಷ ಅವಧಿಗೆ ನಿರ್ವಹಿಸುವ ಕಾಮಗಾರಿ ಒಟ್ಟು 58.54 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡದೆ ಎಂದು ಕಾನೂನು ಸಚಿವ H.K.ಪಾಟೀಲ್ ಹೇಳಿದ್ದಾರೆ.
ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿರುವ ಲ್ಯಾಬ್ಗಳಿಗೆ ಅಗತ್ಯವಿರುವ ರಾಸಾಯನಿಕಗಳು, ಕಂಪ್ಯೂಟರ್ ರೇಡಿಯಾಗ್ರಫಿ ಸಿಸ್ಟಂಗಳಿಗೆ ಡ್ರೈಲೇಸರ್ ಎಕ್ಸ್ರೇಗಳನ್ನು 50.15 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯಕವಿರುವ ಒಟ್ಟು 449 ಸಿಬ್ಬಂದಿ ಸೇವೆಯನ್ನು 11.30 ಕೋಟಿ ರೂ. ಮೊತ್ತದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಆಡಳಿತಾತ್ಮಕ ಅನುಮೋದಿಸಿದೆ. ಕಾನೂನು ಮತ್ತು ನೀತಿ-2023ಕ್ಕೆ ಅನುಮೋದನೆ ನೀಡಲಾಗಿದ್ದು, ಸಂಪುಟ ಉಪಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯಗೆ ಅಧಿಕಾರ ನೀಡಲಾಗಿದೆ. ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು 2023ಕ್ಕೆ ಅನುಮೋದಿಸಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 450, ಕೆಎಸ್ಆರ್ಟಿಸಿಯಿಂದ 300 ಸರ್ಕಾರಿ ಬಸ್ಗಳ ಕಾರ್ಯಾಚರಣೆಗೆ ಸಚಿವ ಸಂಪುಟ ಅನುಮೋದಿಸಿದೆ.
ಮೈಸೂರು ನಗರದಲ್ಲಿ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿ ಮುಡಾ ವತಿಯಿಂದ ಅಭಿವೃದ್ಧಿ, ನಗರ ಸಾರಿಗೆ ನಿಧಿಯಡಿ ಮಂಜೂರು ಮಾಡಿರುವ ಅನುದಾನದಿಂದ ಬಿಎಂಟಿಸಿ ಅನುಮೋದಿತ 20 ಎಲೆಕ್ಟ್ರಿಕ್ ಮಿನಿ ಬಸ್ ಖರೀದಿಸುವ ಬದಲಾಗಿ 20 ಎಸಿ ರಹಿತ ಎಲೆಕ್ಟ್ರಿಕ್ ಬಸ್ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದಿಸಲಾಗಿದೆ.
ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿ ಮತ್ತು ಆಡಳಿತ ನಿಯಂತ್ರಣದಲ್ಲಿರುವ ಕೆಲವು ಯೋಜನೆಗಳು ಕಾಮಗಾರಿಗಳ ಆಸ್ತಿ ಮತ್ತು ಹೊಣೆಗಾರಿಕೆಯನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸಲು ಅನುಮೋದಿಸಲಾಗಿದೆ.
ಕರ್ನಾಟಕ ನೀರಾವರಿ ಕರ ವಿಧಿಸುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ವಾಣಿಜ್ಯೋದ್ಯಮಗಳಿಗೆ ಕೆರೆ ಕಾಲುವೆ ಜಲಾಶಯಗಳಿಂದ ನೀರು ಒದಗಿಸುವುದಕ್ಕೆ ಪ್ರತಿ ಎಂಸಿಎಫ್ಟಿ ನೀರಿಗೆ ಮೂರು ಲಕ್ಷ ರಾಜಧನ ನಿಗದಿ ಮಾಡಲಾಗಿದೆ. 2024 ರ ಫೆಬ್ರವರಿ ತಿಂಗಳಲ್ಲಿ ವಿಧಾನ ಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ ನಡೆಯಲಿದೆ.