ಬೆಂಗಳೂರು: ಬರಗಾಲದಲ್ಲೂ ರಾಜ್ಯದ ಜನರಿಗೆ ಸರ್ಕಾರ ಕುಡಿಯುವ ನೀರಿನ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ. ಗೃಹ ಉಪಯೋಗ ಬಳಕೆ ನೀರಿನ ಮೇಲಿನ ತೆರಿಗೆ ಹೆಚ್ಚಳಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಜನರಿಗೆ ಕುಡಿಯುವ ನೀರು ದುಬಾರಿಯಾಗಲಿದೆ
ಕೈಗಾರಿಕೆಗಳಿಗೆ ನೀಡುವ ನೀರಿನ ಜೊತೆಗೆ ಗೃಹ ಬಳಕೆ ನೀರಿಗೂ ಟ್ಯಾಕ್ಸ್ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಈ ಸಂಬಂಧ ಕರ್ನಾಟಕ ನೀರಾವರಿ (ನೀರಿನ ಕರ ವಿಧಿಸುವಿಕೆ) ನಿಯಮಗಳು 1965 ಕ್ಕೆ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೊಸ ತೆರಿಗೆ ಪ್ರಕಾರ ಗೃಹ ಬಳಕೆ ನೀರಿಗೆ ಪ್ರತಿ MCFTಗೆ (Million Cubic Feet) 320 ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ. ಅದರಂತೆ ಕೈಗಾರಿಕೆಗಳಿಗೆ ಪ್ರತಿ MCFT ಗೆ 3 ಲಕ್ಷ ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ
ರಾಜ್ಯದಲ್ಲಿ ಬರ ತಾಂಡವವಾಡುವ ಸಮಯದಲ್ಲಿ ಗೃಹ ಉಪಯೋಗಿ ನೀರು ಬಳಕೆಗೆ ಟ್ಯಾಕ್ಸ್ ಹೆಚ್ಚಳ ಬೇಕಿತ್ತಾ ಎಂಬ ಆಕ್ರೋಶ ಶುರುವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಕುಡಿಯುವ ನೀರಿಗೂ ಟ್ಯಾಕ್ಸ್ ಹೆಚ್ಚಳ ಮಾಡುವ ಅವಶ್ಯಕತೆ ಇತ್ತಾ ಎಂಬ ಚರ್ಚೆ ಆರಂಭವಾಗಿದೆ.