ಬೆಂಗಳೂರು:– ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗೆ ಇಲ್ಲ ಎಂದು
ಹೈಕೋರ್ಟ್ ಹೇಳಿದೆ.
ಸರ್ಕಾರದ ಯಾವುದೇ ಉದ್ಯೋಗಿ ನಿರ್ದಿಷ್ಟ ಹುದ್ದೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಹಕ್ಕು ಸಾಧನೆ ಮಾಡಲು ಬರುವುದಿಲ್ಲ. ನೌಕರರನ್ನು ಸೇವಾ ಪರಿಸ್ಥಿತಿ ಆಧಾರದ ಮೇಲೆ ವರ್ಗಾವಣೆ ಮಾಡಲಾಗುತ್ತದೆ. ಮೇಲಾಗಿ, ಒಂದೇ ಹುದ್ದೆ ಅಥವಾ ಸ್ಥಳದಲ್ಲಿ ಸರ್ಕಾರಿ ನೌಕರ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದಲ್ಲಿ ಅಲ್ಲಿ ಆತ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.
ಸರ್ಕಾರಿ ನೌಕರ ತಾನಿರುವ ಪ್ರದೇಶದಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳಬಾರದು ಎಂಬ ಉದ್ದೇಶದಿಂದ ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಅವಧಿಗಿಂತ ಹೆಚ್ಚುಕಾಲ ಒಂದು ಹುದ್ದೆ/ಪ್ರದೇಶದಲ್ಲಿ ಉದ್ಯೋಗಿ ಕರ್ತವ್ಯ ನಿರ್ವಹಿಸಿದರೆ, ಆತನನ್ನು ಮತ್ತೊಂದೆಡೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.
ಮುಖ್ಯಮಂತ್ರಿಗಳು ಶಾಸಕಾಂಗದ ಅತ್ಯುನ್ನತ ಅಧಿಕಾರಿ ಆಗಿರುವುದರಿಂದ ಆಡಳಿತದ ಅಗತ್ಯತೆ ಹಾಗೂ ಹಿತದೃಷ್ಟಿಯಿಂದ ಸೇವಾ ದಾಖಲೆಗಳ ಪರಿಶೀಲನೆ ನಂತರ ಯಾವುದೇ ವ್ಯಕ್ತಿಯನ್ನು ವರ್ಗಾವಣೆಗೆ ಪರಿಗಣಿಸಲು ನಿರ್ದೇಶಿಸಬಹುದು. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಈ ಪ್ರಕರಣದಲ್ಲಿ ದಾಖಲೆಗಳ ಪ್ರಕಾರ ಗುರುಪ್ರಸಾದ್ ಅವರನ್ನು ಅರ್ಜಿದಾರನ ಹುದ್ದೆಗೆ ವರ್ಗಾವಣೆ ಮಾಡಲು ‘ಕೋರಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಸಂವಹನ ಪತ್ರದಲ್ಲಿ ಉಲ್ಲೇಖವಾಗಿದೆ. ‘ಕೋರಿದೆ’ ಪದ ಬಳಕೆಯಾಗಿದೆ ಎಂದರೆ ವರ್ಗಾವಣೆಗೆ ಮುಖ್ಯಮಂತ್ರಿಗಳಿಂದ ಶಿಫಾರಸು (ಪ್ರಸ್ತಾವನೆ) ಮಾಡಲಾಗಿದೆ ಎಂದರ್ಥ. ಅದು ಬಿಟ್ಟು ವರ್ಗಾವಣೆಗೆ ಮುಖ್ಯಮಂತ್ರಿಗಳು ಪೂರ್ವಾನುಮತಿ ನೀಡಿದ್ದಾರೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ