ಮಡಿಕೇರಿ, ಡಿಸೆಂಬರ್ 27: ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಹೊಸ ವರ್ಷಾಚರಣೆಗೆ ಕೊಡಗಿಗೆ ಪ್ರವಾಹದಂತೆ ಪ್ರವಾಸಿಗರು ಹರಿದು ಬರುವ ಸಾಧ್ಯತೆಗಳು ಕಂಡು ಬಂದಿದೆ. ಇದಕ್ಕೆ ಪುಷ್ಠಿಕೊಡುವಂತೆ ಕೊಡಗಿನಲ್ಲಿರುವ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಭರ್ತಿಯಾಗಿವೆ. ಆದರೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ಮುನ್ನ ಕೆಲವೊಂದು ವಿಚಾರಗಳನ್ನು ಮನದಟ್ಟು ಮಾಡಿಕೊಂಡು ಅದರಂತೆ ನಡೆದುಕೊಂಡರೆ ‘ಕೊಡಗಿನ ಪ್ರವಾಸ’ ತ್ರಾಸದಾಯಕವಾಗದೆ ಸುಖಕರವಾಗಿರಲಿದೆ. ಈಗಾಗಲೇ ಪ್ರವಾಸಿಗರು ಜಿಲ್ಲೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಹುತೇಕ ಪ್ರವಾಸಿತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಹೀಗೆ ಬರುವ ಪ್ರವಾಸಿಗರಲ್ಲಿ ಕೆಲವರು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗಿದರೆ, ಇನ್ನುಳಿದಂತೆ ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದು, ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುವ ದೃಶ್ಯವೂ ಕಂಡು ಬರುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಸೇರಿ ಪಾರ್ಟಿ ಮಾಡುವುದು, ಕಿರುಚಾಡುವುದಕ್ಕೆ ನಿರ್ಬಂಧ ಹೇರಿ ಎಂಬ ಒತ್ತಾಯವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಇನ್ನು ಹೊಸ ವರ್ಷಾಚರಣೆ ಸಲುವಾಗಿ ಆಗಮಿಸಿ ಹೋಂಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಕೆಲವೊಂದು ನಿಬಂಧನೆಗಳಿಗೆ ಒಳಪಡಲೇ ಬೇಕಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಿಶಬ್ದ ವಲಯಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಮಧ್ಯ ರಾತ್ರಿಯಲ್ಲಿ ಸದ್ದು ಗದ್ದಲಕ್ಕೆ ಬ್ರೇಕ್ ಹಾಕಲಾಗುತ್ತಿದೆ. ವರ್ಷಾಚರಣೆ ಎಂದ ಮೇಲೆ ಮೋಜು ಮಸ್ತಿ ಇದ್ದದ್ದೇ, ಮಧ್ಯರಾತ್ರಿವರೆಗೆ ಪ್ರವಾಸಿಗರ ಕಿರುಚಾಟ, ಸಂತೋಷದ ಅರಚಾಟ, ಮೋಜು ಮಸ್ತಿಯ ಕೂಗು, ಕ್ಯಾಂಪ್ ಫೈರ್ ಹೀಗೆ ಎಲ್ಲವೂ ನಡೆಯುತ್ತದೆ. ಆದರೆ 12 ಗಂಟೆ ಬಳಿಕವೂ ಅದನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಲಾಗಿದೆ.ಹೊಸ ವರ್ಷವನ್ನು ಸ್ವಾಗತಿಸಿದ ನಂತರವೂ ಮೋಜು ಮಸ್ತಿಯನ್ನು ಮುಂದುವರೆಸದೆ, ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡುವಂತೆ ಸೂಚಿಸಲಾಗುತ್ತಿದೆ. ಒಂದು ವೇಳೆ ಅದನ್ನು ಪಾಲಿಸದಿದ್ದರೆ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಲು ಸಿದ್ಥತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮೊದಲೇ ಈ ಬಗ್ಗೆ ಅರಿತು ಇತಿಮಿತಿಯಲ್ಲಿ ನಡೆದುಕೊಂಡರೆ ಎಲ್ಲರಿಗೂ ಒಳ್ಳೆಯದಾಗಲಿದೆ.