ಹಲಿ ಡಿಸೆಂಬರ್ 27: ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಭಾರತ್ ನ್ಯಾಯ್ ಯಾತ್ರೆ (Bharat Nyay Yatra) ಎಂಬ ಹೆಸರಿನ ಬಸ್ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಭಾರತ್ ಜೋಡೋ ಯಾತ್ರೆ ಬಳಿಕ ನಡೆಸಲಾಗುತ್ತಿರುವ ಕಾಂಗ್ರೆಸ್ನ ಅತಿ ದೊಡ್ಡ ಯಾತ್ರೆ ಇದಾಗಿದೆ. ಈ ಪ್ರಯಾಣ ಜನವರಿ 14ರಿಂದ ಮಾರ್ಚ್ 20ರವರೆಗೆ ಮಣಿಪುರದಿಂದ ಪ್ರಾರಂಭವಾಗಿ ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಜೊತೆಗೆ ಭಾರತದ 14 ರಾಜ್ಯಗಳಲ್ಲಿ ಸರಿಸುಮಾರು 6,200 ಕಿಲೋಮೀಟರ್ಗಳ ದೂರವನ್ನು ಕ್ರಮಿಸುತ್ತದೆ. ಒಟ್ಟು 65 ದಿನ ಬಸ್ ರ್ಯಾಲಿ ಮಾಡಲಾಗುತ್ತದೆ.
ಭಾರತ್ ನ್ಯಾಯ್ ಯಾತ್ರೆಯು ಹಿಂದಿನ ಭಾರತ್ ಜೋಡೋ ಯಾತ್ರೆಯನ್ನು ಅನುಸರಿಸುತ್ತದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಒಳಗೊಂಡಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4,000 ಕಿ.ಮೀ.ಗೂ ಹೆಚ್ಚು ಕ್ರಮಿಸಲಾಯಿತು. ಜನವರಿ 30 ರಂದು ಇದು ಶ್ರೀನಗರದಲ್ಲಿ ಮುಕ್ತಾಯಗೊಂಡಿತು. ಮುಂಬರುವ ಭಾರತ್ ನ್ಯಾಯ್ ಯಾತ್ರೆಯು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅನ್ಯಾಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಜೊತೆಗೆ ಸಾರ್ವಜನಿಕರೊಂದಿಗೆ ತೊಡಗಿಸಿಕೊಳ್ಳುವ ಮತ್ತು ಪ್ರಮುಖ ರಾಷ್ಟ್ರೀಯ ಕಾಳಜಿಗಳನ್ನು ಚರ್ಚಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ. ಭಾರತ್ ನ್ಯಾಯ ಯಾತ್ರೆಯ ಮಾರ್ಗದ ವಿವರಗಳನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾತ್ರೆಯು ನಾಗರಿಕರೊಂದಿಗೆ ನೇರ ಸಂವಾದಕ್ಕೆ ಅನುಕೂಲವಾಗುವಂತೆ ಬಸ್ ಪ್ರಯಾಣ ಮತ್ತು ಕಾಲ್ನಡಿಗೆಯನ್ನೂ ಒಳಗೊಂಡಿರುತ್ತದೆ.
ಮಣಿಪುರವನ್ನು ಆರಂಭಿಕ ಹಂತವಾಗಿ ಆಯ್ಕೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಣಿಪುರ ರಾಜ್ಯವು ದೇಶದ ಪ್ರಮುಖ ಭಾಗವಾಗಿದೆ. ಮಣಿಪುರದ ಜನರ ಗಾಯಗಳನ್ನು ಗುಣಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪಕ್ಷವು ಬಯಸಿದೆ.