ಬೆಂಗಳೂರು,ಡಿಸೆಂಬರ್ 28: 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಠಕ್ಕರ್ ಕೊಡಲು ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಆದರೆ ಬಿಜೆಪಿ ಪಾಳಯದಲ್ಲಿ ದಿನದಿಂದ ದಿನಕ್ಕೆ ಅಸಮಾಧಾನ ಸ್ಟೋಟಗೊಳ್ಳುತ್ತಿದ್ದು, ಹೈಕಮಾಂಡ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದಗೌಡರು ಅಸಮಾಧಾನ ಹೊರಹಾಕಿದ್ದಾರೆ. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಸದಾನಂದಗೌಡರು ಪಕ್ಷದ ವರಿಷ್ಠ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದು, ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಸಮಾಧಾನ ಮಾಡುವ ಪ್ರಯತ್ನ ರಾಜ್ಯ ಬಿಜೆಪಿ ನಾಯಕರಿಂದ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನಲೆ ಪಕ್ಷದಲ್ಲಿರುವ ಅಸಮಾಧಾನವನ್ನ ಶಮನಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರುವುದೇ ದೊಡ್ಡ ತಲೆನೋವಾಗಿದೆ. ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಸದಾನಂದಗೌಡರ ಅಸಮಾಧಾನವನ್ನ ಶಮನಗೊಳಿಸಲು ಬಿಜೆಪಿಯಲ್ಲಿ ಕಸರತ್ತು ಮುಂದುವರೆದಿದೆ.
ಬುಧವಾರ ಸದಾನಂದಗೌಡದ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಅಸಮಾಧಾನ ಶಮನಕ್ಕೆ ಕಸರತ್ತು ನಡೆಸಿದ್ದಾರೆ. ಈ ವೇಳೆ ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುವ ಆಸೆ ಇದೆಯೇ ಎಂಬುದನ್ನು ರಾಜ್ಯ ನಾಯಕರು ಕೇಳಿದ್ದಾರೆ. ಒಂದು ವೇಳೆ ನೀವು ಸ್ಪರ್ಧಿಸದಿದ್ದರೆ ಪರ್ಯಾಯವಾಗಿ ಸಮರ್ಥರಾದವರನ್ನು ಸೂಚಿಸಿ ಎಂದೂ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರೂ ಸೇರಿದಂತೆ ಹಾಲಿ ಹಾಗೂ ಮಾಜಿ ಶಾಸಕರ ವಿಶ್ವಾಸ ಗಳಿಸಿರುವ ಸದಾನಂದಗೌಡರನ್ನು ದೂರವಿಟ್ಟು ಚುನಾವಣೆ ಎದುರಿಸಿದರೆ ಸೋಲುವ ಸಾಧ್ಯತೆ ಹೆಚ್ಚು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ. ಹೀಗಾಗಿ, ಸದಾನಂದಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಲೆಕ್ಕಾಚಾರ ಬಿಜೆಪಿ ನಾಯಕರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸುದ್ದಿಗೋಷ್ಟಿಯಲ್ಲಿ ಸಂಸದ ಸದಾನಂದಗೌಡ ಅವರು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯಿಂದ 40 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಬಿಜೆಪಿ ನಾಯಕ ಯತ್ನಾಳ್ ಅವರೇ ಖುದ್ದಾಗಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದು ಅದರಿಂದ ಪಕ್ಷಕ್ಕೆ ತೀವ್ರವಾಗಿ ಮುಜುಗರವಾಗಿದೆ. ಹಿಂದೆ ಪಕ್ಷದಲ್ಲೇ ಉಳಿಸಿಕೊಂಡಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ ಎಂದು ಸದಾನಂದಗೌಡರು ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ ಯತ್ನಾಳ್ ಅವರು ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡಿದಾಗ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೆ. ಆದರೆ, ಆಗ ಯಡಿಯೂರಪ್ಪ ಅವರೇ ಖುದ್ದಾಗಿ ನನ್ನನ್ನು ಸಂಪರ್ಕಿಸಿ ಯತ್ನಾಳ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದರು. ಹಾಗಾಗಿ, ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ, ಅದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ ಎಂದ ಸದಾನಂದ ಗೌಡರು ಬಿಜೆಪಿ ನಾಯಕರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.