ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ ಕಾಂಗ್ರೆಸ್ ಸರ್ಕಾರ ರಾಜ್ಯದ ವಾಹನ ಸವಾರರಿಗೆ ಬಂಪರ್ ಆಫರ್ ಪ್ರಕಟಿಸಿದೆ. ರಾಜ್ಯ ಸರ್ಕಾರವು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಯಲ್ಲಿ 60-90 % ರಷ್ಟು ರಿಯಾಯಿತಿ ಘೋಷಿಸಿದೆ.
ಒನ್-ಟೈಮ್ ಪಾವತಿ ಯೋಜನೆಯು ಡಿಸೆಂಬರ್ 26 ರಿಂದ ಜನವರಿ 10 ರವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ತಳ್ಳುವ ಗಾಡಿಗಳ ಮಾಲೀಕರಿಗೆ 90% ರಷ್ಟು ರಿಯಾಯಿತಿ ನೀಡಲಾಗುವುದು. ಅವರು ಚಲನ್ ಮೊತ್ತದ ಕೇವಲ 10 % ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 90 % ಮನ್ನಾ ಮಾಡಲಾಗುತ್ತದೆ. ಆರ್ಟಿಸಿ ಚಾಲಕರಿಗೂ ಅದೇ ರಿಯಾಯಿತಿ ನೀಡಲಾಗುತ್ತದೆ.
ಸರ್ಕಾರವು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಂಡದ ಮೊತ್ತದಲ್ಲಿ 80 % ಮನ್ನಾ ಮಾಡಿದೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು, ಟ್ರಕ್ಗಳು ಮತ್ತು ಇತರ ಭಾರೀ ವಾಹನಗಳಿಗೆ 60 % ರಿಯಾಯಿತಿ ಇದೆ.
ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಿಯಾಯಿತಿ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ವಾಹನ ಮಾಲೀಕರ ಅನುಕೂಲಕ್ಕಾಗಿ ಸರ್ಕಾರ ಇದನ್ನು ಜಾರಿಗೆ ತಂದಿದೆ. ಮೊತ್ತವನ್ನು ಪಾವತಿಸಲು, ವಾಹನ ಮಾಲೀಕರು ತೆಲಂಗಾಣ ಟ್ರಾಫಿಕ್ ಇ-ಚಲನ್ ವೆಬ್ಸೈಟ್ಗೆ ಭೇಟಿ ನೀಡಿ, ತಮ್ಮ ವಾಹನಗಳ ವಿರುದ್ಧ ಬಾಕಿ ಉಳಿದಿರುವ ಚಲನ್ಗಳನ್ನು ಪರಿಶೀಲಿಸಿ ಮತ್ತು ರಿಯಾಯಿತಿ ಮೊತ್ತವನ್ನು ಆನ್ಲೈನ್ನಲ್ಲಿ ಪಾವತಿಸಲು ಸರ್ಕಾರಿ ಆದೇಶವು ತಿಳಿಸಿದೆ.
ರಾಜ್ಯಾದ್ಯಂತ ಸುಮಾರು ಎರಡು ಕೋಟಿ ಟ್ರಾಫಿಕ್ ಚಲನ್ಗಳು ಬಾಕಿ ಉಳಿದಿವೆ ಎಂದು ವರದಿಗಳು ಹೇಳುತ್ತಿವೆ. 2022 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 7,563.60 ಕೋಟಿ ರೂ. ಮೌಲ್ಯದ 4.73 ಕೋಟಿ ಚಲನ್ಗಳನ್ನು ನೀಡಲಾಗಿದೆ ಎಂದು ಕೇಂದ್ರವು ಸಂಸತ್ತಿಗೆ ತಿಳಿಸಿತ್ತು. ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2021 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 5,318.70 ಕೋಟಿ ರೂ. ಮೌಲ್ಯದ 4.21 ಕೋಟಿ ಚಲನ್ಗಳನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.