ಬೆಂಗಳೂರು:- ಕರವೇ ನಾರಾಯಣಗೌಡರನ್ನು ರಿಲೀಸ್ ಮಾಡಬೇಕು ಇಲ್ಲವಾದರೆ ಬೆಂಗಳೂರು ಬಂದ್ಗೆ ಕರೆ ಕೊಡುವುದಾಗಿ ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಸರಕಾರಕ್ಕೆ ಎಚ್ಚರಿಕೆ ನೀಡಿವೆ.
ಮತ್ತೂಂದೆಡೆ ವಾಟಾಳ್ ನಾಗರಾಜ್ ಅವರು, ಬಂಧಿತರ ಬಿಡುಗಡೆಗೆ 24 ಗಂಟೆಗಳ ಗಡುವು ನೀಡಿದ್ದಾರೆ.
ವಸಂತನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ 80ಕ್ಕೂ ಹೆಚ್ಚು ಕನ್ನಡಪರ ಸಂಘಟನೆ ಮುಖಂಡರು ಪಾಲ್ಗೊಂಡಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸಹಿತ ಎಲ್ಲ ಹೋರಾಟಗಾರರ ಸಭೆ ಕರೆದು ಬೆಂಗಳೂರು ಬಂದ್ಗೆ ಕರೆ ಕೊಡುವ ಕಾಲ ಸನ್ನಿಹಿತ ಆಗುತ್ತದೆ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬಂಧಿತ ಎಲ್ಲರನ್ನೂ ಬೇಷರತ್ ಆಗಿ ಬಿಡುಗಡೆ ಮಾಡಬೇಕು, ಕನ್ನಡಪರ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರಕಾರ ಹಿಂಪಡೆದುಕೊಳ್ಳಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಮನವಿ ಮಾಡಲಾಯಿತು.
ಫೆ.28ರ ಒಳಗೆ ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕನ್ನಡದಲ್ಲಿ ಇರದಿದ್ದರೆ ಬೆಂಗಳೂರಿನಲ್ಲಿ ಎಲ್ಲ ಕನ್ನಡ ಸಂಘಟನೆಗಳೂ ಮತ್ತೆ ಬೀದಿಗೆ ಇಳಿಯಲಿವೆ. ಡಾ| ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಇಲ್ಲಿನ ಎಲ್ಲ ಕಾರ್ಖಾನೆ, ಐಟಿ-ಬಿಟಿ ಕಂಪೆನಿಗಳಲ್ಲಿ ಈ ನೆಲದ ಮಕ್ಕಳಿಗೆ ಉದ್ಯೋಗ ಕೊಡಬೇಕೆಂದು ಕರ್ನಾಟಕ ರಕ್ಷಣ ವೇದಿಕೆ ಮೂಲಕ ಆಗ್ರಹಿಸುತ್ತಿರುವುದಾಗಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.