ಬೆಂಗಳೂರು:- ಹೊಸವರ್ಷಾಚರಣೆಗೆ ನಗರದಾದ್ಯಂತ ಸಿದ್ಧತೆಗಳು ಜೋರಾಗಿಯೋ ನಡೆಯುತ್ತಿವೆ. ಡಿಸೆಂಬರ್ 31ರ ಮಧ್ಯರಾತ್ರಿ ನಗರದಲ್ಲಿ ಜನರ ಓಡಾಟ ಹೆಚ್ಚಿರುವ ಕಾರಣ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಹೊಸ ವರ್ಷದಂದು ಜನ ಸಂಚಾರದ ಅನುಕೂಲಕ್ಕಾಗಿ ನೇರಳೆ ಮತ್ತು ಹಸಿರುವ ಎರಡೂ ಮಾರ್ಗಗಳಲ್ಲಿ ರೈಲು ಸೇವೆಯನ್ನು ವಿಸ್ತರಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಘೋಷಣೆ ಮಾಡಿದೆ.
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್ ಹೊರತು ಪಡಿಸಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಜನವರಿ 1ರಂದು ಬೆಳಗ್ಗೆ 1.30ಕ್ಕೆ ಕೊನೆಯ ರೈಲು ಹೊರಡಲಿದೆ. ಆದರೆ ಮೆಜೆಸ್ಟಿಕ್ನಿಂದ ಅಂದು ಬೆಳಗ್ಗೆ 2 ಗಂಟೆಗೆ 15 ನಿಮಿಷಕ್ಕೆ ಕೊನೆಯ ರೈಲು ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. 15 ನಿಮಿಷಕ್ಕೊಮ್ಮೆ ರೈಲು ಸೇವೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸ್ ಇಲಾಖೆಯಿಂದ ಬಂದಿರುವ ಸಲಹೆ ಮೇರೆಗೆ ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಮಹಾತ್ಮಾ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಡಿಸೆಂಬರ್ 31ರ ರಾತ್ರಿ 11 ಗಂಟೆಗೆ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನವನ್ನು ಮುಚ್ಚಲಾಗುತ್ತದೆ. ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಯಾವುದೇ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ. ಆದರೆ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ರೈಲು ನಿಲುಗಡೆ ಇರಲಿದೆ.
ಪ್ರಯಾಣಿಕರು ಯಾವುದೇ ಮೆಟ್ರೋ ನಿಲ್ದಾಣದಿಂದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ಹೊಸ ವರ್ಷಕ್ಕೆ ವಿಸ್ತರಣೆಯಾಗಿರುವ ಸಮಯದಲ್ಲೂ ಪ್ರಯಾಣಕ್ಕೆ ಟೋಕನ್ಗಳು, ಸ್ಮಾರ್ಟ್ ಕಾರ್ಡ್ಗಳು, ಎನ್ಸಿಎಂಎಸಿ ಕಾರ್ಡ್ಗಳು ಹಾಗೂ ಕ್ಯೂಆರ್ ಟಿಕೆಟ್ಗಳನ್ನು ಬಳಸಬಹುದು.
ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರಿಗೆ 50 ರೂಪಾಯಿ ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ಮುಂಗಡವಾಗಿ ಖರೀದಿಸುವ ಆಯ್ಕೆಯನ್ನು ಪ್ರಕಟಿಸಲಾಗಿದೆ. ಈ ಟಿಕೆಟ್ಗಳು ರಾತ್ರಿ 8 ಗಂಟೆಯಿಂದ ಬೆಂಗಳೂರಿನ ಯಾವುದೇ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬೇಕಾದರೂ ಖರೀದಿ ಮಾಡಬಹುದು.