ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅಲ್ಲ. ಕಾಂಗ್ರೆಸ್ಗೂ ಯತ್ನಾಳ್ಗೂ ಸಂಬಂಧ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣುತ್ತಿದೆ. ಯತ್ನಾಳ್ ಹಿಂದಿನಿಂದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯ.
ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದು ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ. ಸರ್ಕಾರ ಕೂಡ ತನಿಖೆ ಮಾಡ್ತಾ ಇದೆ. ಕೊರೊನಾ ಸಂದರ್ಭದಲ್ಲಿ ಗುತ್ತಿಗೆದಾರರ ಅಸೋಸಿಯೇಷನ್ ಆರೋಪ ಸೇರಿ ಎಲ್ಲ ತನಿಖೆ ಮಾಡ್ತೇವೆ. ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದು ತಿಳಿಸಿದರು.
ಜಾತಿ ಜನಗಣತಿ ವಿಚಾರದಲ್ಲಿ ಪದೇ ಪದೇ ಹೇಳಿಸಬೇಡಿ. ಹಿಂದೂ ಲಿಂಗಾಯತ, ಹಿಂದೂ ಬಣಜಿಗ, ಹಿಂದೂ ಸಾದರ ಎಂದು ಜಾತಿ ಜನಗಣತಿಯಲ್ಲಿ ಬರೆಸಿದ್ದಾರೆ. 2ಎ ಮೀಸಲಾತಿ ಸಲುವಾಗಿ ಬೇರೆ ಬೇರೆ ಬರೆಸಿದರೆ ಯಾವುದೇ ಪ್ರಯೊಜನ ಇಲ್ಲ. 17-22% ನಾವು ಲಿಂಗಾಯತರು ರಾಜ್ಯದಲ್ಲಿ ಇದ್ದೇವೆ. ಒಂದೇ ಸೂರಿನಡಿ ಎಲ್ಲ ಲಿಂಗಾಯತರನ್ನು ತರಬೇಕಿದೆ. ಜಾತಿ ಜನಗಣತಿಗೆ ನಮ್ಮ ವಿರೋಧವಿಲ್ಲ. ಗೊಂದಲಗಳನ್ನು ಸರಿಪಡಿಸಿ ಎಂಬುದಷ್ಟೇ ನಮ್ಮ ಆಗ್ರಹ ಎಂದರು