ಬೆಂಗಳೂರು:- ಹೊಸವರ್ಷ ಆಚರಣೆಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ನಗರದಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಬಿಂದು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಂದೋಬಸ್ತ್ ಬಗ್ಗೆ ಶನಿವಾರ ರಾತ್ರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಗರ ವ್ಯಾಪ್ತಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್ಸ್ಪೆಕ್ಟರ್, 600 ಪಿಎಸ್ಐ, 600 ಎಎಸ್ಐ, 1800 ಎಚ್ಸಿ, 5200 ಕಾನ್ಸ್ಟೇಬಲ್ಗಳು ಸೇರಿ ಒಟ್ಟು 8500 ಪೊಲೀಸರು ನಿಯೋಜಿತರಾಗಿದ್ದಾರೆ. ಇವರಲ್ಲದೆ ನಗರ ಸಶಸ್ತ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಸಹ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 1 ಗಂಟೆ ಬಳಿಕ ಸಂಭ್ರಮಾಚರಣೆ ನಡೆಯುವ ಎಲ್ಲ ಹೋಟೆಲ್, ಪಬ್, ಹೋಟೆಲ್ಗಳ ಬಾಗಿಲು ಬಂದ್ ಮಾಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇನ್ನು ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್ಗಳು, ಪಬ್ಗಳು ಹಾಗೂ ಕ್ಲಬ್ಗಳು ಸೇರಿದಂತೆ ಇತರೆಡೆ ಜನರನ್ನು ನಿಯಂತ್ರಿಸಲು ಬಂದೋಬಸ್ತ್ ಪಿಕೆಟಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಿದ್ದಾರೆ.
ಬ್ರಿಗೇಡ್-ಎಂ.ಜಿ.ರಸ್ತೆಗಳ ವ್ಯಾಪ್ತಿಯಲ್ಲಿ 4 ಡಿಸಿಪಿಗಳು, 10 ಎಸಿಪಿಗಳು, 30 ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜಿತರಾಗಿದ್ದಾರೆ. ಇವರಲ್ಲದೆ 250 ಸಿಸಿಟಿವಿ ಕ್ಯಾಮೆರಾಗಳು ಹಾಗೂ 16 ವೀಕ್ಷಣಾ ಗೋಪುರಗಳ ಮೂಲಕ ಕೂಡಾ ಖಾಕಿ ಹದ್ದಿನ ಕಣ್ಣಿಡಲಿದೆ. ಹಾಗೆಯೇ 18 ಮಹಿಳಾ ಸುರಕ್ಷತಾ ತಾಣ ತೆರೆಯಲಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ಮೇಲ್ಸೇತುವೆ ಹೊರತುಪಡಿಸಿ ಡಿ.31ರಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಗರದ ಇನ್ನುಳಿದ ಎಲ್ಲ ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.