ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಲೀಗ್ನ ಮಸರತ್ ಆಲಮ್ ಬಣ (ಎಂಎಲ್ಜೆಕೆ-ಎಂಎ) ಸಂಘಟನೆ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿದೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಐದು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ. ‘‘ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ಉಗ್ರ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಸಂಘಟನೆ ಮೇಲೆ ನಿಷೇಧ ಹೇರಲಾಗಿದೆ,’’ ಎಂದು ಸರಕಾರ ಹೇಳಿದೆ.
‘‘ಪ್ರತ್ಯೇಕತಾವಾದಿ ಮಸ್ರತ್ ಆಲಮ್ ಭಟ್ ನೇತೃತ್ವದ ಈ ಸಂಘಟನೆಯು ಜಮ್ಮು-ಕಾಶ್ಮೀರದಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸಲು ಜನರನ್ನು ಪ್ರಚೋದಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಜತೆ ವಿಲೀನಗೊಳಿಸಲು ಕುತಂತ್ರ ಹೆಣೆಯುತ್ತಿದೆ. ಅಲ್ಲದೇ ಪಾಕಿಸ್ತಾನ ಪರ ಪ್ರಚಾರ ಮಾಡುತ್ತಿದೆ. ಹಾಗಾಗಿ, ಕೋಮು ಸೌಹಾರ್ದತೆ ಕದಡುವ ಇಂಥ ದೇಶ ವಿರೋಧಿ ಸಂಘಟನೆಯನ್ನು 1967ರ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ,
(ಯುಎಪಿಎ) ನಿಷೇಧಿಸಲಾಗಿದೆ,’’ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ. “ದೇಶದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆ ವಿರುದ್ಧ ನಡೆದುಕೊಳ್ಳುವ ಯಾರೇ ಆದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ಅವರು ಕಾನೂನಿನ ಅಡಿ ಸಂಪೂರ್ಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ನರೇಂದ್ರ ಮೋದಿ ಸರ್ಕಾರದ ಸಂದೇಶ ಸ್ಪಷ್ಟವಾಗಿದೆ” ಎಂದು ಸಚಿವಾಲಯ ತಿಳಿಸಿದೆ.