ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಸಚಿವರು ಸ್ಪರ್ಧಿಸುವ ಬಗ್ಗೆ ರಾಜ್ಯದ ನಾಯಕರು ನಿರ್ಧರಿಸುತ್ತಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಕುರಿತಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು.
ರಾಜ್ಯದಲ್ಲಿ ಕೆಲವು ಸಚಿವರನ್ನು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಸಲಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, “ನೀವು ಈ ಬಗ್ಗೆ ಇಲ್ಲಿನ ನಾಯಕರನ್ನು ಕೇಳಬೇಕು. ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದನ್ನು ರಾಜ್ಯ ಚುನಾವಣಾ ಸಮಿತಿ ನೋಡುತ್ತದೆ,” ಎಂದರು.
ರಾಜ್ಯ ಚುನಾವಣಾ ಸಮಿತಿಯ ಅಭಿಪ್ರಾಯದ ಬಳಿಕ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮುಂದಿನ ನಿರ್ಧಾರ ಆಗುತ್ತದೆ. ಯಾರು ಸ್ಪರ್ಧೆ ಮಾಡಬೇಕು, ಯಾರು ಮಾಡಬಾರದು ಎಂಬುದನ್ನು ರಾಜ್ಯ ಚುನಾವಣಾ ಸಮಿತಿ ನಿರ್ಧಾರ ಮಾಡಿದ ಬಳಿಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಬರುತ್ತದೆ. ಆಗ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದರು.