ಬೆಂಗಳೂರು: ಅಲ್ಪಸಂಖ್ಯಾತರ ಬಡಾವಣೆಗಳ ಸುಧಾರಣೆಗೆ 11 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ ಮಾಡಿದಂತೆಯೇ ಹಿಂದೂ-ಮುಸ್ಲಿಮರನ್ನು ಬೇರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಒಂದೇ ವಾರದಲ್ಲಿ ಪ್ರತಿ ರೈತರಿಗೆ 2 ಸಾವಿರ ರೂ. ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ವಾಸ್ತವವಾಗಿ ಪ್ರತಿಯೊಬ್ಬರಿಗೆ 30 – 40 ಸಾವಿರ ರೂ. ಕೊಡಬೇಕಿತ್ತು. ಇವರಿಗೆ ಅಷ್ಟು ಹಣ ನೀಡಲು ಕೂಡ ಯೋಗ್ಯತೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ವಿರೋಧ ಬರುತ್ತದೆಂದು 2 ಸಾವಿರ ರೂ. ಘೋಷಿಸಿದ್ದರು.
ಅದನ್ನು ಕೊಡುವ ಯೋಗ್ಯತೆ ಇಲ್ಲದವರು ಮಾನ ಮರ್ಯಾದೆ ಇಲ್ಲದೆ 11 ಸಾವಿರ ಕೋಟಿ ರೂಪಾಯಿ ಯನ್ನು ಅಲ್ಪಸಂಖ್ಯಾತರ ಬಡಾವಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ ಎಂದು ದೂರಿದರು. ಹಿಂದೆ ಟಿಪ್ಪು ಸುಲ್ತಾನ ಹಿಂದೂ ಮುಸ್ಲಿಮರನ್ನು ಬೇರೆ ಮಾಡಿದಂತೆ ಸಿಎಂ ಸಿದ್ದರಾಮಯ್ಯನವರು ಈಗ ಮಾಡುತ್ತಿದ್ದಾರೆ. ಮುಸ್ಲಿಮರ ಕಾಲೋನಿ ಬೇರೆ, ಹಿಂದೂಗಳ ಪ್ರದೇಶ ಬೇರೆ ಎಂದು ವರ್ಗೀಕರಣ ಮಾಡಿ ಸಂವಿಧಾನಕ್ಕೆ ಅಪಚಾರವಸೆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.