ಗತಿಸಿದ ವರ್ಷ ಎಷ್ಟೋ ನೋವು ಹಾಗೂ ನಲಿವುಗಳನ್ನು ಕೊಟ್ಟಿರಬಹುದು, ಆದರೆ ಈಗ ನಮಗೆ ಸಾಗಲು ಬೇಕಿರುವುದು ನಲಿವಿನ ಇಂಧನ ಮಾತ್ರ. ಹಾಗೇಯೇ ನಮ್ಮನ್ನು ಹತಾಶೆಗೆ ಸಿಲುಕಿಸಿದ ಎಡವಿದ ಹೆಜ್ಜೆಗಳನ್ನು ಮರಳಿ ಇಡಬಾರದೆಂಬ ಎಚ್ಚರಿಕೆ. ಕಳೆದ ವರ್ಷಗಳ ನಿರ್ಧಾರಗಳು ಏನಾದವೋ? ಈ ಬಗ್ಗೆ ಚಿಂತೆ ಬೇಡ. ಈ ಬಾರಿಯ ನಿರ್ಧಾರಗಳು ಹಳಿ ತಪ್ಪದಂತೆ ಹೇಗೆ ಸ್ಟೇರಿಂಗ್ ಹಿಡಿಯಬೇಕು ಎಂಬ ಬಲವಾದ ನಿರ್ಧಾರದೊಂದಿಗೆ ಹೆಜ್ಜೆ ಇಡಬೇಕಾದ ಸಮಯ ಇದು. ಪ್ರತಿ ಹೆಜ್ಜೆಯಲ್ಲೂ ಗೆಲುವನ್ನು ಹುಡುಕಬೇಕಿದೆ. ಆ ಹುಡುಕುವಿಕೆಯಲ್ಲಿ ನೂರು ಸಂಭ್ರಮದ ಹೆಜ್ಜೆಗಳು ಇಣುಕಬೇಕಿದೆ.
ಮನುಷ್ಯ ಬದುಕಿನಲ್ಲಿ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಹೀಗಿರುವಾಗ ಯಾವ ಬೆಲೆಯೇ ಇಲ್ಲದ ನೋವುಗಳಿಗೆ ನಮ್ಮ ಕಿಸೆಯಲ್ಲಿ ಏನು ಕೆಲಸ ಹೇಳಿ? ಕೈತಪ್ಪಿದ ಯಾವ ಕ್ಷಣವೂ ನಮ್ಮದಲ್ಲ! ಮತ್ಯಾಕೆ ಮೊಬೈಲ್ನಲ್ಲಿ ಅದೇ ನೋವುಗಳನ್ನು ನೆನಪಿಸುವ ಆ.. ಸಾಂಗ್ಸ್? ಎದೆಯಲ್ಲಿ ನೋವು ಕರೆಗಿಸುವ ಹಾಡು ರಿಂಗಣಿಸಲು, ಪ್ರತಿ ಹಾಡೂ ಎಚ್ಚರಿಕೆಯ ಸುಪ್ರಭಾತ ಹಾಡಲಿ. ಮತ್ಯಾಕೆ ಎದೆ ಪಂಜರದಿಂದ ಹೊರಟ ನೋವಿನ ಹಕ್ಕಿಯನ್ನು ಕರೆ ತರುವ ಯತ್ನ! ಸಾಕಲ್ಲವೇ.. ಕತ್ತಲೆಯಲ್ಲಿ ಕತ್ತಲಾಗುವ ಹುಚ್ಚು, ಇನ್ನಾದರೂ ಬೆಳಕಿನ ದಿಕ್ಕಿನ ಕಿಟಕಿಯನ್ನು ತೆಗೆದಿಡೋಣ. ಕಿಟಕಿ ಮೂಲಕ ಬಂದ ಬೆಳಕು, ಬದುಕನ್ನು ಬೆಳಗಲಿ. ಸೊಡರೆಣ್ಣೆ ತೀರದಂತೆ ನಮ್ಮ ಮನಸುಗಳು ಕಾಪಾಡಿಕೊಳ್ಳಲಿ.