ಬೆಂಗಳೂರು:– ಬೆಂಗಳೂರಿನ ಮಾಲ್ ಆಫ್ ಏಷ್ಯಾ ವಿರುದ್ಧ ಕ್ರಮ ಬೇಡ ಎಂದು ಹೈಕೋರ್ಟ್ ಹೇಳಿದೆ.
ಒಂದು ದಿನದ ಮಟ್ಟಿಗೆ ಮಾಲ್ ಅನ್ನು ಮುಚ್ಚಲಾಗುವುದು ಎಂಬ ಮಾಲ್ ಆಫ್ ಏಷ್ಯಾದ ಪರ ವಕೀಲರ ಭರವಸೆ ದಾಖಲಿಸಿಕೊಂಡ ಕರ್ನಾಟಕ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಮಾಲ್ ವಿರುದ್ದ ಕ್ರಮಕ್ಕೆ ಮುಂದಾಗದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಪ್ರಶ್ನಿಸಿ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಭಾನುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಜೆ. ಎಸ್. ಕಮಲ್ ಅವರಿದ್ದ ವಿಶೇಷ ಪೀಠದ ಮುಂದೆ ಮಾಲ್ ಪರ ವಕೀಲರು ಮಾಹಿತಿ ನೀಡಿದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಲ್ ಆಡಳಿತವು ಮಾಲ್ ಒಂದು ದಿನದ ಮಟ್ಟಿಗೆ ಮುಚ್ಚಲಾಗುವುದು. ಜತೆಗೆ, ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿರುವ ಸಮಸ್ಯೆಗಳಿಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಾಲ್ ಪರ ವಕೀಲರು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಸೌಹಾರ್ದಯುತವಾಗಿ ಪರಿಹರಿಸುವವರೆಗೆ ಅಥವಾ ನ್ಯಾಯಾಲಯದಿಂದ ಮುಂದಿನ ಆದೇಶವನ್ನು ನೀಡುವವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಪೀಠ ತಿಳಿಸಿದೆ.