ಪಣಜಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರಗಳನ್ನು ಪ್ರದರ್ಶಿಸಿ ದೇವರಿಗೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸನ್ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಸನ್ಬರ್ನ್ ಸಂಘಟಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ, ಮಾಪುಸಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು, ಸನಾತನ ಧರ್ಮವನ್ನು ಅಪಮಾನಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದ್ದಾರೆ. ಮಾಪುಸಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಕಾಂಗ್ರೆಸ್ ನಾಯಕ ವಿಜಯ್ ಭಿಕೆ, ಈ ಉತ್ಸವದಲ್ಲಿ ಮದ್ಯಪಾನ,
ನಿಷೇಧಿತ ಪದಾರ್ಥಗಳ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವ ಶಿವನ ಚಿತ್ರಗಳನ್ನು ಬಳಿಸಿ, ಸಂಘಟಕರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ನಿಂದ ದೂರು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.