ಮರಗಳ್ಳತನ ಆರೋಪದಲ್ಲಿ ಪ್ರತಾಪ್ ಸಿಂಹ ಸೋದರನಿಗೆ ಸಂಕಷ್ಟ ಎದುರಾಗಿತ್ತು. ಮರಗಳ ಮಾರಣಹೋಮ ಮಾಡಿದ ಆರೋಪದಲ್ಲಿ ವಿಕ್ರಮ್ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು.. ಬಳಿಕ ಮರ ಕಡಿದ ವಿಚಾರದ ಬಗ್ಗೆ ವಿಚಾರಣೆಗೂ ಒಳಪಡಿಸಿದ್ದರು. ಅರೆಸ್ಟ್ ಆದ ಬೆನ್ನಲ್ಲೇ ವಿಕ್ರಮ್ ಸಿಂಹಗೆ ಜಾಮೀನು ಸಿಕ್ಕಿದೆ.. ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಸಂಸದ ಪ್ರತಾಪ್ ಸಿಂಹ ಸೋದರನ ವಿರುದ್ಧ ಮರಗಳ್ಳತನ ಆರೋಪ ಕೇಳಿಬಂದಿತ್ತು.. ಹಾಸನದಲ್ಲಿ 10 ಎಕರೆ ಜಮೀನು ಖರೀದಿಸಿ ಅದರಲ್ಲಿದ್ದ ಮರಗಳ ಮಾರಣಹೋಮ ಮಾಡಿದ ಆರೋಪ ಬೆನ್ನುಬಿದ್ದಿತ್ತು.. ಇದರ ಬೆನ್ನಲ್ಲೇ ಅಲರ್ಟ್ ಆಗಿದ್ದ ಹಾಸನ ಅರಣ್ಯಾಧಿಕಾರಿಗಳು ವಿಕ್ರಮ ಸಿಂಹಗೆ ಬಲೆ ಬೀಸಿದ್ರು.. ಮೊನ್ನೆ ಸಂಜೆ ಬೆಂಗಳೂರಿನಲ್ಲಿ ಬಂಧಿಸಿದ್ರು. ಆದ್ರೀಗ ವಿಕ್ರಮ್ ಸಿಂಹಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಮರಗಳ್ಳತನ ಆರೋಪ.. ವಿಕ್ರಮ್ ಸಿಂಹಗೆ ಜಾಮೀನು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಆರೋಪದಲ್ಲಿ ಮೊನ್ನೆ ವಿಕ್ರಮ್ ಸಿಂಹರನ್ನ ಬಂಧಿಸಲಾಗಿತ್ತು. ಶನಿವಾರ ಸಂಜೆ ಬೆಂಗಳೂರಿನಲ್ಲಿ ವಿಕ್ರಂ ಸಿಂಹನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಬೆಂಗಳೂರಿನಿಂದ ಹಾಸನಕ್ಕೆ ಕರೆದೊಯ್ಯಲಾಗಿತ್ತು.. ಹಾಸನದ ಗೆಂಡೆಕಟ್ಟೆಯಲ್ಲಿರೋ ಅರಣ್ಯ ಇಲಾಖೆ ಗೆಸ್ಟ್ ಹೌಸ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಮರ ಕಡಿದ ಪ್ರಕರಣದಲ್ಲಿ ಅಮಾನತು ಗೊಂಡಿದ್ದ ಎಸಿಎಫ್ ಪ್ರಭುಗೌಡ ಹಾಗೂ ಆರ್ಎಫ್ಓ ವಿನಯ್ ಕುಮಾರ್ ವಿಕ್ರಮ್ ಸಿಂಹನ ವಿಚಾರಣೆ ನಡೆಸಿದರು.
ಹಾಸನ ಜಡ್ಜ್ ಮನೆಯಿಂದ ವಕೀಲರ ಜೊತೆ ಹೊರಬಂದ ವಿಕ್ರಮ್ ಸಿಂಹ ಸರ್ಕಾರದ ವಿರುದ್ಧ ಗುಡುಗಿದ್ರು. ರಾಜಕೀಯ ಪಿತೂರಿಯಿಂದ ನನ್ನನ್ನು ಬಂಧಿಸಲಾಗಿದೆ. ವ್ಯವಸ್ಥಿತವಾಗಿ ನನ್ನನ್ನ ಮುಗಿಸುವುದಕ್ಕಾಗಿ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಬ್ರದರ್ನ ಟಾರ್ಗೆಟ್ ಮಾಡ್ತಿದ್ದಾರೆ, ಟೈಮ್ ಬರಲಿ ಎಲ್ಲದನ್ನೂ ಹೇಳಲುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ವಿಕ್ರಮ್ ಆಕ್ರೋಶ ಹೊರಹಾಕಿದ್ದಾರೆ.
ವಿಕ್ರಂ ಸಿಂಹ ಬಂಧನವಾಗ್ತಿದ್ದಂತೆ ಅವರ ಸೋದರ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನನ್ನ ಮುಗಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ಮಾಡ್ತಿದ್ದಾರೆ. ತಮ್ಮ ಮಗನನ್ನ ಎಂ.ಪಿ. ಮಾಡಲು ನಮ್ಮ ಫ್ಯಾಮಿಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ತಾಯಿ, ನನ್ನ ತಂಗಿ ಎಲ್ಲರನ್ನೂ ಬಂಧಿಸಿ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.
ಒಟ್ಟಾರೆ, ವಿಕ್ರಂ ಸಿಂಹ ಬಂಧನ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಕೈ-ಕಮಲ ಮಾತಿನ ಕದನ ನಡೆಯುವಂತೆ ಮಾಡಿದೆ. ಸದ್ಯ ವಿಕ್ರಮ್ ಸಿಂಹ ಅರಣ್ಯಾಧಿಕಾರಿಗಳ ಬಂಧನದಿಂದ ಮುಕ್ತಯೇನೋ ಆಗಿದ್ದಾರೆ. ಆದರೆ ಪ್ರಕರಣದ ತನಿಖೆಯನ್ನು ಅರಣ್ಯ ಇಲಾಖೆ ಮುಂದುವರಿಸಿದೆ.