ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಾಗೂ ಜೈಹಿಂದ್ ಚಾನೆಲ್ ಸುದ್ದಿಸಂಸ್ಥೆಗೆ ಹೂಡಿಕೆ ಮಾಡಿದ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ಮಾಡಲಾಗ್ತಿದೆ. ನನ್ನ ವಿರುದ್ಧ ಏನಾದರೂ ಮಾಡಲಿ, ಜೈಲಿಗಾದರೂ ಹಾಕಲಿ. ಎಲ್ಲದಕ್ಕೂ ರೆಡಿಯಾಗಿದ್ದೇನೆ. ನಾನು ಹೆದರಲ್ಲ ಅಂತ ಖಡಕ್ ಸವಾಲು ಹಾಕಿದ್ದಾರೆ.
ಸಿಬಿಐ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಜೈ ಹಿಂದ್ ಮಾಧ್ಯಮಕ್ಕೆ ಅಷ್ಟೇ ನೋಟಿಸ್ ಕೊಟ್ಟಿಲ್ಲ. ಹಾಪ್ ಕಾಮ್ಸ್, ಸಬ್ ರಿಜಿಸ್ಟಾರ್ಗಳಿಗೂ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಸಿಬಿಐಗೆ ಕೊಟ್ಟ ಅನುಮತಿಯನ್ನು ಹಿಂಪಡೆದಿದೆ. ಆದರೂ ಕೂಡ ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು, ಈಗ ಕಿರುಕುಳ ನೀಡೋಕೆ ಅಲ್ಲಿ ದೊಡ್ಡ ದೊಡ್ಡ ಜನ ಇದ್ದಾರೆ. ಅದೆಲ್ಲಾ ನನಗೆ ಗೊತ್ತಿದೆ ಎಂದಿರುವ ಡಿ.ಕೆ ಶಿವಕುಮಾರ್ ಅವರು ನನ್ನ ರಾಜಕೀಯವಾಗಿ ಮುಗಿಸಬೇಕು ತೊಂದರೆ ಮಾಡಬೇಕು ಅನ್ನೋ ಷಡ್ಯಂತ್ರ ನಡೀತಿದೆ ಎಂದು ಆರೋಪಿಸಿದ್ದಾರೆ. ನನ್ನ ಜೈಲಿಗೆ ಕಳುಸ್ತೀವಿ ಅಂತ ಕೆಲ ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದರು. ನಾನು ಅವರನ್ನ ಕರೆದು ಚರ್ಚೆ ಮಾಡೋಣ ಬನ್ನಿ ಅಂದಿದ್ದೆ. ದೊಡ್ಡ ಪ್ಲಾಂಟ್ ನಡೀತಾ ಇದೆ. ನಾನೇನು ತಪ್ಪು ಮಾಡಿಲ್ಲ. ಅವರು ಏನು ಬೇಕಾದರೂ ತನಿಖೆ ಮಾಡಲಿ. ಎಲ್ಲಿ ನನಗೆ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ ಎಂದರು.