ರಾಮನಗರ ಜನವರಿ 02: ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನೇಮಕ ವಿಚಾರಲ್ಲಿ ಹಾಲು ಉತ್ಪಾದಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಸಹಕಾರ ಇಲಾಖೆಯ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿ ಅಣ್ಣೆಹಳ್ಳಿ ಗ್ರಾಮಸ್ಥರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಚಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರ ತಾಲೂಕಿನ ಅಣ್ಣೆಹಳ್ಳಿ ಗ್ರಾಮದ ಹಾಲು ಉತ್ಪಾದಕ ರೈತರು, ಸಹಕಾರ ಇಲಾಖೆಯ ಅಧಿಕಾರಿಗಳು ಕಳೆದ 19 ವರ್ಷಗಳಿಂದ ಸಂಘಕ್ಕೆ ಚುನಾವಣೆ ನಡೆಸದೆ ಸಂಘದಲ್ಲಿ ಕಾರ್ಯದರ್ಶಿಗಳು ಅಕ್ರಮ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಹಸುಗಳನ್ನು ಕರೆತಂದು ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನೆಡೆಸಿದರು.
ನಗರದ ಹಳೆ ಬೆಂಗಳೂರು -ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಜಾನುವಾರುಗಳೊಂದಿಗೆ ಜಮಾಯಿಸಿದ ಅಣ್ಣೆಹಳ್ಳಿ ರೈತರು ಹಸುಗಳನ್ನು ರಸ್ತೆಯಲ್ಲಿ ಕಟ್ಟಿಹಾಕಿ ನೂರಾರು ಲೀಟರ್ ಹಾಲನ್ನು ರಸ್ತೆಯಲ್ಲಿ ಸುರಿದು ಸಹಾಕಾರ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.