ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದ್ವೇಷ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ದೇವಾಲಯದ ಬಗ್ಗೆ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಮೋದಿಜೀ ಅವರು ಅಯೋಧ್ಯೆ ವಿಮಾನ ನಿಲ್ದಾಣವನ್ನು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದರು
ಶ್ರೀರಾಮಮಂದಿರ ನಿರ್ಮಾಣದ ಕುರಿತು ಸಂತಸ ಸೂಚಿಸಿ ದೇಶದ 125 ಕೋಟಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.