ಬೆಂಗಳೂರು:- ನಮ್ಮ ಜೊತೆಯಲ್ಲೇ ಇದ್ದು, ಬೇರೆ ಪಕ್ಷದ ಜತೆ ಕೈಜೋಡಿಸಿದವರ ವಿರುದ್ಧ ಕ್ರಮವಾಗಲಿ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸದಿದ್ದರೆ ಇದೇ ತಿಂಗಳ 16ರಂದು ಎಲ್ಲವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರು? ಹೇಗೆ ಕೆಲಸ ಮಾಡಿದ್ದಾರೆ, ಏನೇನು ಮಾಡಿದ್ದಾರೆ ಎಂಬುದು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಗೊತ್ತಿದೆ. ಕೂಡಲೇ ಅವರು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಾನೇ ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ವಿಜಯೇಂದ್ರ ಆಪ್ತ ರುದ್ರೇಶ್ಗೆ ಎಚ್ಚರಿಕೆ ಕೊಟ್ಟರು.
ನಮ್ಮಂತಹವರ ಮೇಲೆ ಗದಾಪ್ರಹಾರ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಚಿಂತನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು ಎಂದರು.
ಚಾಮರಾಜನಗರ ಜಿಲ್ಲೆಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ರಾಜ್ಯಾಧ್ಯಕ್ಷರು, ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಸಿಡಿಮಿಡಿಗೊಂಡರು. ನಾನು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆದರೆ ನಮ್ಮವರೇ ನನಗೆ ಏನು ಮಾಡಿದ್ದಾರೆ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲವೇನೆಂದಲ್ಲ. ಬೇರೆ ಪಕ್ಷದವರ ಜೊತೆ ಕೈ ಜೋಡಿಸಿದವರು ಯಾರು ಎಂಬುದು ನಮ್ಮ ಅಧ್ಯಕ್ಷರಿಗೆ ಗೊತ್ತಿದೆ. ತಕ್ಷಣವೇ ಅಂಥವರ ಮೇಲೆ ಕ್ರಮ ಆಗಲೇಬೇಕು. ಪಕ್ಷಕ್ಕೆ ಮುಜುಗರವಾಗಬಾರದೆಂದು ನಾನು ಕೆಲವು ಕಹಿ ಸತ್ಯಗಳನ್ನು ನುಂಗಿಕೊಂಡಿದ್ದೇನೆ. ಎಲ್ಲಿಯವರೆಗೂ ನಾನು ಸಹಿಸಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.