ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷವು, ಸಿದ್ದರಾಮಯ್ಯ ಅವರು ಕರ್ನಾಟಕದ ಸೊಕ್ಕಿನ ಮನುಷ್ಯ ಟೀಕಾಪ್ರಹಾರ ನಡೆಸಿದೆ. ಅಲ್ಲದೆ, ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ಯಾವ ಅತೀಂದ್ರ ಶಕ್ತಿ ಅಡ್ಡವಿದೆ ಎಂದು ಪ್ರಶ್ನೆ ಮಾಡಿದೆ.
ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ಹೌದು. ದೇಶವನ್ನು ಜಾತಿ,ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.
ಗೌಡರ ಕೈ ಅನುಗ್ರಹದ ದ್ಯೋತಕ
ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ.ಅವರ ಹಸ್ತ ಅಭಯ ಹಸ್ತ. ಅದು ಆಶೀರ್ವಾದ, ಅನುಗ್ರಹದ ದ್ಯೋತಕ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಸಿದ್ದರಾಮಯ್ಯನವರೇ? ಎಂದು ಜೆಡಿಎಸ್, ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
ಅಪರ ಬ್ರೂಟಸ್ ಎಂದು ಕಿಡಿ
ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ.. ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ.