ಉತ್ತರ ಪ್ರದೇಶದ ಬಘ್ಪತ್ನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕಳೆದುಹೋಗಿದ್ದರು. ಮನೆಯವರು ಆತ ವಿರೋಧಿಯಿಂದ ಹತ್ಯೆ ಆಗಿದ್ದಾನೆ ಎಂದು ತಿಳಿದುಕೊಂಡಿದ್ದರು. ಆದರೆ ಐದು ವರ್ಷಗಳ ಬಳಿಕ ಆ ವ್ಯಕ್ತಿ ಜೀವಂತ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಯೋಗೇಂದ್ರ ಕುಮಾರ್ ಎಂಬ ವ್ಯಕ್ತಿ ಬಘ್ಪತ್ನ ಸಿಂಘ್ವಾಲಿ ಅಹಿರ್ ಪ್ರದೇಶದಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದ. ಈತನ ವಿರುದ್ಧ 2018ರಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಗ್ರಾಮದ ವೇದ ಪ್ರಕಾಶ್ ಎಂಬ ವ್ಯಕ್ತಿಯು, ಜಗಳವಾಡಿದ್ದ ಕಾರಣಕ್ಕೆ ಯೋಗೇಂದ್ರ ಕುಮಾರ್ ಹಾಗೂ ಆತನ ಸಹೋದರನ ಮೇಲೆ ಕೇಸ್ ದಾಖಲಿಸಿದ್ದ. ಅದಾದ ಬಳಿಕ ಯೋಗೇಂದ್ರ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ಬೆನ್ನಲ್ಲೇ ಕುಟುಂಬಸ್ಥರು ಪ್ರಕಾಶ್ ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆ ಅಂದುಕೊಂಡಿದ್ದರು. ಅಲ್ಲದೇ ಪ್ರಕಾಶ್ ವಿರುದ್ಧ ಕುಟುಂಬಸ್ಥರು ಕೇಸ್ ಕೂಡ ದಾಖಲಿಸಿದ್ದರು. ಕೋರ್ಟ್ ಆದೇಶದಂತೆ ಪ್ರಕಾಶ್ ವಿರುದ್ಧ ಕಿಡ್ನ್ಯಾಪ್ ಮತ್ತು ಕೊಲೆ ಕೇಸ್ ದಾಖಲಾಗಿತ್ತು. ಸತತ 8 ತಿಂಗಳ ಕಾಲ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಯೋಗೇಂದ್ರ ಕುಮಾರ್ ಸಾವನ್ನಪ್ಪಿದ್ದಾನೆ ಅನ್ನೋದಕ್ಕೆ ಯಾವುದೇ ಪುರಾವೆ ಸಿಕ್ಕಿರಲಿಲ್ಲ.
ಇದೀಗ ಪೊಲೀಸರು ಯೋಗೇಂದ್ರ ಕುಮಾರ್ ಇರುವ ಪ್ರದೇಶವನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ವಿಚಾರಣೆ ಕೂಡ ಮಾಡಿದ್ದಾರೆ. ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಈತ, ಇನ್ನೊಂದು ಮಹಿಳೆಯನ್ನು ಮದುವೆಯಾಗಿದ್ದಾನೆ. ಜೊತೆಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾನೆ ಅನ್ನೋದನ್ನು ತಿಳಿದುಕೊಂಡಿದ್ದಾರೆ. ನಾನು ಆರೋಪಿ ಪ್ರಕಾಶ್ನೊಂದಿಗೆ ವೈರತ್ವ ಹೊಂದಿದ್ದೇನೆ. ಜೊತೆಗೆ ದೆಹಲಿಯ ರೋಹಿಣಿ ಪ್ರದೇಶದ ಮಹಿಳೆ ಜೊತೆ ಸಂಬಂಧ ಹೊಂದಿದ್ದೇನೆ. 2018ರಲ್ಲಿ ನನ್ನ ಮೇಲೆ ಕೇಸ್ ದಾಖಲಾದ ಬಳಿಕ ಮನೆ ಬಿಟ್ಟುಬಂದೆ ಎಂದಿದ್ದಾನೆ.