ಲಕ್ನೋ: ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವ್ಹಾದ್ ವಿರುದ್ಧ ಅಯೋಧ್ಯೆಯ ಅರ್ಚಕ ಪರಮಹಂಸ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು,
ಇನ್ನೊಂದು ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಬಹುಶಃ ಅವರು ಇಲ್ಲಿಯವರೆಗೆ ಬದುಕಿರುತ್ತಿರಲಿಲ್ಲ. ರಾಮನನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ. ಶ್ರೀರಾಮನ ಟೀಕೆಗೆ ಕಿವಿಗೊಡದ ಭಾರತ ಇದು ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಎನ್ಸಿಪಿ ನಾಯಕನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಜಿತೇಂದ್ರ ಅವ್ಹಾದ್ ರನ್ನು ನಾನೇ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಿತೇಂದ್ರ ಅವ್ಹಾದ್ ಅವರು ನೀಡಿದ ಹೇಳಿಕೆಯು ಅವಹೇಳನಕಾರಿಯಾಗಿದೆ. ಇದು ರಾಮ ಭಕ್ತರ ಭಾವನೆಗೆ ನೋವುಂಟುಮಾಡುತ್ತದೆ. ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಆಚಾರ್ಯರು ತಿಳಿಸಿದ್ದಾರೆ.