ಬೆಂಗಳೂರು: ಯಾವ ಕಾಯಕವೂ ಮೇಲು ಅಲ್ಲ, ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮತ್ತು ಸಮಾನ ಘನತೆ ಹೊಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗಾಂಧಿ ಭವನದಲ್ಲಿ ಮಂಗಳವಾರ ಸವಿತಾ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ ಎಸ್ ಮುತ್ತುರಾಜ್ ಅವರ ‘ಮಂಗಳವಾದ್ಯ’ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಟರಾಗಿ ಜನಪ್ರಿಯತೆ ಗಳಿಸಿರುವ ಎಂ.ಆರ್.ಮುತ್ತುರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ” ಎಂದರು.
“ನಾನು ಕೊನೆಯವರೆಗೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ರಾಜಕಾರಣ ಮಾಡ್ತೀನಿ. ನಾವು ರೂಪಿಸುವ ಕಾರ್ಯಕ್ರಮಗಳೂ ಬಡವರ ಪರವಾಗಿ ಇರುತ್ತವೆ. ನಮ್ಮ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಬಿಜೆಪಿಯವರ ಟೀಕೆಗೆ ಜನ ಬೆಲೆ ಕೊಡಲ್ಲ. ನಾನೂ ಕೊಡಲ್ಲ. ನಾಡಿನ ಜನ ನಮ್ಮ ಜತೆಗಿದ್ದಾರೆ” ಎಂದರು.