ಒಂದು ಕಾಲದಲ್ಲಿ ಲಕ್ಷದ್ವೀಪಗಳನ್ನು ‘ಲಕ್ಕಾಡಿವ್ ದ್ವೀಪಗಳು’ ಎಂದು ಕರೆಯಲಾಗುತ್ತಿತ್ತು. ಭಾರತದ ಕೆಲವು ಸುಂದರ ಮತ್ತು ವಿಲಕ್ಷಣ ದ್ವೀಪಗಳಲ್ಲಿ ಇವು ಕೂಡ ಒಂದಾಗಿದೆ. ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶವು ಕೇವಲ 36 ದ್ವೀಪಗಳನ್ನು ಹೊಂದಿದ್ದು ಒಟ್ಟು 32 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು 12 ಹವಳಗಳು, 3 ಬಂಡೆಗಳು ಮತ್ತು 5 ಮುಳುಗಿರುವ ದಡಗಳಿಂದ ಮಾಡಲ್ಪಟ್ಟಿದೆ.
ಲಕ್ಷದ್ವೀಪದ ಪ್ರವಾಸ ಮಾಡುವ ಮೊದಲು ನೀವು ಇಲ್ಲಿಗೆ ಯಾವಾಗ ಹೋಗಬೇಕು, ಯಾವ ಸಮಯದಲ್ಲಿ ಎಂಬುದು ಬಹಳ ಮುಖ್ಯ. ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡಲು ಸೆಪ್ಟೆಂಬರ್ನಿಂದ ಫೆಬ್ರವರಿ ಅತ್ಯುತ್ತಮ ಸಮಯ. ಮಾರ್ಚ್ನಿಂದ ಮೇ ತಿಂಗಳುಗಳು ಸಹ ಉತ್ತಮವಾದ ತಿಂಗಳುಗಳಾಗಿವೆ ಆದರೆ ಹವಾಮಾನವು 2-3 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲದಲ್ಲಿ ಆದಷ್ಟು ಹೋಗುವುದನ್ನು ತಪ್ಪಿಸುವುದು ಒಳ್ಳೆಯದು.
ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..?
- ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು ಸೌಭಾಗ್ಯವೇ ಸರಿ.
- ಮಿನಿಕಾಯ್ ದ್ವೀಪ: ತಿಳಿ ನೀಲಿ ಅಕಾಶ ನೋಡುತ್ತಾ ತಿಳಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್ ಹೋಗಲು ಹೇಳಿ ಮಾಡಿಸಿದ ತಾಣ ಈ ಮಿನಿಕಾಯ್ ದ್ವೀಪವಾಗಿದೆ.
- ಅಮಿನಿ ಬೀಚ್: ಸ್ಕೂಬಾ ಡೈವಿಂಗ್ ಮಾಡುವವರು ಈ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಅಪಾರ ಜಲಚರ, ಹವಳದ ದಿಬ್ಬಗಳನ್ನು ಇಲ್ಲಿ ಕಾಣಬಹುದಾಗಿದೆ.
- ಅಗಟ್ಟಿ ಐಲ್ಯಾಂಡ್: ಸುಂದರ ಸಮುದ್ರ ತೀರದಲ್ಲಿ ವಿಹಾರ ಕೈಗೊಳ್ಳಬಹುದು. ಜೊತೆಗೆ ರುಚಿಕಟ್ಟಾದ ಮೀನೂಟಕ್ಕೆ ಈ ಜಾಗ ಫೇಮಸ್ ಆಗಿದೆ. ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಈ ಐಲ್ಯಾಂಡ್.
- ಮರಿನ್ ಮ್ಯೂಸಿಯಂ: ಸಮುದ್ರದ ಜಲಚರ ಮ್ಯೂಸಿಯಂ ಇದು. ಚಿತ್ರವಿಚಿತ್ರ ಸಮುದ್ರ ಜೀವಿಗಳ ಪಳಯಳಿಕೆಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಧ್ಯಯನ ಪ್ರಿಯರ ಮೆಚ್ಚಿನ ತಾಣ ಈ ಮೂಸಿಯಂ.
- ಪಿಟ್ಟಿ ಪಕ್ಷಿಧಾಮ: ಲಕ್ಷದ್ವೀಪ ಎಂದ್ರೆ ಬರೀ ದ್ವೀಪಗಳು ಎಂಬ ಕಲ್ಪನೆ ಇದೆ. ಆದರೆ ಇಲ್ಲಿನ ಪಿಟ್ಟಿ ಪಕ್ಷಿಧಾಮ ಅಸಂಖ್ಯಾತ ವಿದೇಶಿ ಹಕ್ಕಿಗಳ ಗೂಡಾಗಿದೆ.