ಬೆಂಗಳೂರು: ಅತಿ ಶೀಘ್ರದಲ್ಲೇ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಆಗಬೇಕು ಎಂಬ ಆಶಯ ನಮ್ಮದು. ಆಗ ಕಾರ್ಯಕರ್ತರಿಗೂ ಗೊಂದಲ ಇರುವುದಿಲ್ಲ. ಇದೇ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಕೇಂದ್ರದ ವರಿಷ್ಠರ ಜೊತೆ ಇದರ ಕುರಿತು ಚರ್ಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಅತಿ ಶೀಘ್ರವೇ ದೆಹಲಿಗೆ ತೆರಳುತ್ತೇನೆ. ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಭ್ರಷ್ಟ, ದುಷ್ಟ, ರೈತವಿರೋಧಿ, ಬಡವರ ವಿರೋಧಿ ಸರಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಬೇಕಿದೆ. ಆದ್ದರಿಂದ ವರಿಷ್ಠರನ್ನು ಭೇಟಿ ಮಾಡಿ ಅತಿ ಶೀಘ್ರವೇ ಅಭ್ಯರ್ಥಿಗಳ ಕುರಿತು ಸ್ಪಷ್ಟತೆ ಕೊಡಲು ಮನವಿ ಮಾಡಲಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ತನ್ನ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಫಲಿತಾಂಶವನ್ನು ಪಡೆಯಲಿದೆ ಎಂದು ವಿಶ್ವಾಸದಿಂದ ನುಡಿದರು. ಕರ್ನಾಟಕದ ಎಲ್ಲ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಮಾಡಿ ಮೋದಿಜೀ ಅವರಿಗೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.