ನವದೆಹಲಿ:- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಡಿ ರೂಪ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು. ಈ ವೇಳೆ, ಡಿ ರೂಪಾ ಅವರು ಕ್ಷಮೆ ಕೇಳಲೇಬೇಕು ಎಂದು ರೋಹಿಣಿ ಸಿಂಧೂರಿ ಅವರು ಪಟ್ಟು ಹಿಡಿದರು.
ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಅವಹೇಳನಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬೇಕು. ಇದರಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹಾಗಾಗಿ, ಡಿ ರೂಪಾ ಅವರು ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದ್ದಾರೆ
ರೋಹಿಣಿ ಅವರ ವಾದವನ್ನು ತಿರಸ್ಕರಿಸಿದ ಡಿ. ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನ್ಯಾಯಾಲಯದ ಗಮನಕ್ಕೆ ತಂದರು. ಡಿ. ರೂಪಾ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಪರ ವಕೀಲರು, ಹೌದು, ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆಂದು ಹೇಳಿದ್ದೇನೆ. ಹೊರತು ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ ಎಂದು ತಿಳಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿದ ನ್ಯಾಯಮೂರ್ತಿ ಎ ಎಸ್ ಓಕಾ ಅವರು, ಇಬ್ಬರೂ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕಾಗಿ ಒಂದು ತಿಂಗಳ ಸಮಯ ನೀಡಲಾಗುವುದು ಎಂದು ತಿಳಿಸಿದರು