ಬೆಂಗಳೂರು:- ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಸದ್ಯದ ಮಟ್ಟಿಗೆ ಮಳೆ ಮುನ್ನೆಚ್ಚರಿಕೆಯಾಗಲಿ, ತಾಪಮಾನದ ಮುನ್ಸೂಚನೆ ಇಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಗಳಿಗೆಗೊಂದು ವಾತಾವರಣವು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಾರದ ಹಿಂದೆ ಮಳೆಯು ಅಬ್ಬರಿಸುತ್ತಿತ್ತು. ಇದೀಗ ಏಕಾಏಕಿ ಬಿಸಿಲು, ಗಾಳಿ ಎರಡು ಒಟ್ಟೊಟ್ಟಿಗೆ ದಾಳಿ ಮಾಡುತ್ತಿದೆ. ಸದ್ಯ ದಿಢೀರ್ ಹವಾಮಾನ ವೈಪರಿತ್ಯದಿಂದಾಗಿ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ಜ.13ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಲ್ಲಿ ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಲಿದೆ. ಜತೆಗೆ ಗಾಳಿ ವೇಗವು ಜೋರಾಗಿರಲಿದ್ದು, ಸಂಜೆ ಥಂಡಿ ಗಾಳಿ ಬೀಸಲಿದೆ.