ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಗವಿಗಂಗಾಧರೇಶ್ವರನಿಗೆ ಸೂರ್ಯದೇವ ಸ್ಪರ್ಶಿಸಿದ ಈ ವಿದ್ಯಾಮಾನ ಕಣ್ತುಂಬಿಕೊಳ್ಳಲು ಭಕ್ತಗಣ ಸಾಕ್ಷಿಯಾಯಿತು.
ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಆಗಮಿಸಿದರು. ಸೂರ್ಯ ರಶ್ಮಿ ಸ್ಪರ್ಶ ವೇಳೆ ಗವಿಗಂಗಾದರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯ ಪ್ರವೇಶ ಮಾಡಿದ ಸೂರ್ಯ ರಶ್ಮಿ ನಂದಿಯನ್ನ ಸ್ಪರ್ಶಿಸಿದ. ದಕ್ಷಿಣಯಾನದಿಂದ ಉತ್ತರಯಾನ ಪಥ ಬದಲಾವಣೆ ಮಾಡಲಿರೋ ಸೂರ್ಯ ಗರ್ಭ ಗುಡಿಯ ಮುಂಭಾಗದಲ್ಲಿರೋ ಸ್ಪಟಿಕ ಲಿಂಗಕ್ಕೆ ಸ್ಪರ್ಶಿಸಿ ಶಿವಲಿಂಗ ಪೀಠದ ಸ್ಪರ್ಶ ಮಾಡಿದ. ಬಳಿಕ ಸೂರ್ಯದೇವ ಈಶ್ವರನ ಪಾದ ಸ್ಪರ್ಶ ಮಾಡಿದನು. ಸೂರ್ಯ ರಶ್ಮಿ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡರು. ಲಿಂಗಭಾಗದಲ್ಲಿ 18 ಸೆಕೆಂಡ್ ಸೂರ್ಯರಶ್ಮಿ ಬಿದ್ದಿದೆ. ಇದರ ಮೇಲೆ ಹೊಸ ವರ್ಷದ ಭವಿಷ್ಯ ಇರಲಿದೆ ಅನ್ನೋದು ನಂಬಿಕೆ.