ವಾಷಿಂಗ್ಟನ್: ಮಹಿಳೆಯೊಬ್ಬಳನ್ನು ತನ್ನ ಗೆಳೆಯನ 18 ತಿಂಗಳ ಮಗುವಿಗೆ ನೇಲ್ ಪಾಲಿಶ್ ರಿಮೂವರ್ ಹಾಗೂ ಸಣ್ಣ ಸ್ಕ್ರೂಗಳನ್ನು ತಿನ್ನಿಸಿ ಹತ್ಯೆಗೈದ ಆರೋಪದ ಮೇಲೆ ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಅಲಿಸಿಯಾ ಓವೆನ್ಸ್ ಎಂಬ ಮಹಿಳೆ ಮಗುವನ್ನು ಹತ್ಯೆಗೈದ ಆರೋಪಿಯಾಗಿದ್ದು ಆಕೆಯನ್ನು ಬಂಧಿಸಲಾಗಿದೆ. ಮಹಿಳೆ 2023ರ ಜೂನ್ನಲ್ಲಿ ತನ್ನ ಗೆಳೆಯನ ಮಗುವಿಗೆ ನೇಲ್ ಪಾಲಿಶ್,
ಸ್ಕ್ರೂ ಹಾಗೂ ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ ಹತ್ಯೆಗೈದಿದ್ದಳು ಎಂದು ಆರೋಪಿಸಲಾಗಿದೆ. ಮೃತಪಟ್ಟ ಮಗುವನ್ನು ಐರಿಸ್ ಎಂದು ಗುರುತಿಸಲಾಗಿದೆ. ಮಗುವಿಗೆ ಕಳೆದ ಜೂನ್ನಲ್ಲಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಶವಪರೀಕ್ಷೆಯ ಬಳಿಕ ಮಗುವಿನ ಹೊಟ್ಟೆಯಲ್ಲಿ ಬಟನ್ ಆಕಾರದ ಬ್ಯಾಟರಿಗಳು ಮತ್ತು ಸ್ಕ್ರೂಗಳು ಸಿಕ್ಕಿದ್ದವು.
ಅಲ್ಲದೇ ನೇಲ್ ಪಾಲಿಶ್ ಕುಡಿಸಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಆರೋಪಿ ಮಹಿಳೆ, ಮಕ್ಕಳಿಗೆ ವಿಷಕಾರಿಯಾದ ಸೌಂದರ್ಯವರ್ಧಕ ಮತ್ತು ಮಕ್ಕಳ ಸಾವಿಗೆ ಕಾರಣವಾಗುವ ಔಷಧಿಗಳ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಡಿದ್ದಳು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.