ಇಂದೋರ್: ಶಿವಂ ದುಬೆ ತೂಫಾನ್ ಬ್ಯಾಟಿಂಗ್.. ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುತ ಆಟ.. ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಗೆದ್ದು ಬೀಗಿದ ಭಾರತ.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 6 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್ಗಳಲ್ಲಿ 173 ರನ್ ಸಿಡಿಸಿತು. ಅಫ್ಘಾನ್ ನೀಡಿದ 173 ರನ್ಗಳ ಕಠೀಣ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಕ್ಲೀನ್ ಬೌಡ್ ಆಗಿ ಶೂನ್ಯಕ್ಕೆ ನಿರ್ಗಮಿಸಿದರು.
ಬಳಿಕ, ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಜೊತೆಗೂಡಿ ಜವಾಬ್ದಾರಿಯುವ ಆಟ ಪ್ರದರ್ಶಿಸಿದರು. ಈ ಜೋಡಿ 50 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿತು. ಕೊಹ್ಲಿ 16 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 29 ರನ್ ಗಳಿಸಿ ನವೀನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಇಂದೋರ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಯಾಯಿತು.
ಜೈಸ್ವಾಲ್ ಜೊತೆಗೂಡಿದ ಆಲ್ರೌಂಡರ್ ಶಿವಂ ದುಬೆ ಅಫ್ಘಾನ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರು ದಾಂಡಿಗರು ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಸಿಡಿಸಿದರು. ಯಶಸ್ವಿ ಜೈಸ್ವಾಲ್ 34 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧ ಶತಕ (68) ಸಿಡಿಸಿ ಔಟಾದರು.
ಶಿವಂ ದುಬೆ ಭರ್ಜರಿ ಅರ್ಧ ಶತಕ
32 ಎಸೆತಗಳನ್ನು ಎದುರಿಸಿದ ಶಿವಂ ದುಬೆ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ (63*) ಅರ್ಧ ಶತಕ ಸಿಡಿಸಿ ಮಿಂಚಿದರು. ಈ ಸರಣಿಯಲ್ಲಿ ದುಬೆ ಅವರ ಎರಡನೇ ಅರ್ಧ ಶತಕ ಇದಾಗಿದೆ. ಭಾರತ ಕೇವಲ 15.4 ಓವರ್ಗಳಲ್ಲಿ 173 ರನ್ಗಳ ಗುರಿಯನ್ನು ತಲುಪಿತು. ಉಳಿದಂತೆ ಜಿತೇಶ್ ಶರ್ಮಾ ಶೂನ್ಯಕ್ಕೆ ಔಟಾದರೆ, ರಿಂಕು ಸಿಂಗ್ ಅಜೇಯ 9 ರನ್ ಗಳಿಸಿದರು. ಅಫ್ಘಾನ್ ಪರ ಕರೀಂ 2, ಫಾರೀಕಿ ಹಾಗೂ ನವೀನ್ ತಲಾ ಒಂದು ವಿಕೆಟ್ ಪಡೆದರು. 4 ಓವರ್ ಬೌಲ್ ಮಾಡಿ 17 ರನ್ ನೀಡಿ 2 ವಿಕೆಟ್ ಪಡೆದ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.