ಇಂದೋರ್: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ಭದ್ರತೆ ಉಲ್ಲಂಘಿಸಿದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಗೆ ಸಂಕಷ್ಟ ಎದುರಾಗಿದೆ.
ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನ್ನಿಂಗ್ಸ್ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ. ಓಡಿಬಂದು ಬೌಂಡರಿ ಲೈನ್ ಬಳಿ ನಿಂತಿದ್ದ ಕೊಹ್ಲಿಯ ಪಾದಮುಟ್ಟಿದ್ದಾನೆ, ಬಳಿಕ ಅಪ್ಪಿಗೊಂಡು ಭಾವುಕನಾಗಿದ್ದಾನೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ
ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಮುಗಿದ ಬಳಿಕ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.