ಬೆಂಗಳೂರು: ಬೆಂಗಳೂರು ವಾಹನ ಸವಾರರೇ ಎಚ್ಚರ. ರಸ್ತೆಯ ಮೇಲಿನ ಜಲ್ಲಿ ಕಲ್ಲು ನಿಮ್ಮ ಜೀವಕ್ಕೆ ಕುತ್ತು ತರಬಹುದು ಜೋಕೆ. ಹೌದು, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳು ಜಲ್ಲಿ ಕಲ್ಲು ಹಾಕಿ ಹೋಗುತ್ತಾರೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿದ್ದಂತೆ ಗುಂಡಿಗಳಿಂದ ಜಲ್ಲಿ ಕಲ್ಲುಗಳು ಹೊರಗೆ ಬರುತ್ತವೆ.
ರಸ್ತೆಯ ಮೇಲೆಲ್ಲಾ ಜಲ್ಲಿ ಕಲ್ಲು ಬಿದ್ದಿರುತ್ತವೆ. ಇದರಿಂದ ಬೈಕ್ ಸವಾರರು ತೊಂದರೆ ಅನುಭವಿಸುತ್ತಾರೆ. ಬಿಳೇಕಳ್ಳಿಯ ರಾಘವೇಂದ್ರ ಕಾಲೋನಿ, ಫರ್ಸ್ಟ್ ಕ್ರಾಸ್ ರಸ್ತೆಯಲ್ಲಿ ಜಲ್ಲಿ ಕಲ್ಲು ಬಿದ್ದಿದ್ದು, ಬೈಕ್ ಸವಾರರು ವೇಗವಾಗಿ ಬರುತ್ತಿರುವಾಗ ಸ್ಕಿಡ್ ಆಗಿ ಕೆಳಗೆ ಬೀಳುತ್ತಿದ್ದಾರೆ.
ಗುಂಡಿ ಮುಚ್ಚುವ ಸಲುವಾಗಿ ರಸ್ತೆ ಮೇಲೆ ಜಲ್ಲಿ ಕಲ್ಲು ಹಾಕಲಾಗಿದೆ. ಜಲ್ಲಿ ಕಲ್ಲು ಮೇಲೆ ಬೈಕ್ ಬರುತ್ತಿದ್ದಂತೆ ಸ್ಕೀಡ್ ಆಗಿ ಸವಾರರು ರಸ್ತೆ ಮೇಲೆ ಬೀಳುತ್ತಿದ್ದಾರೆ. ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರು ಬೈಕ್ನಿಂದ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ಮತ್ತು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಏಳು ದಿನಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಮೂಲ್ಯ ಜೀವಗಳು ಹೋಗುವ ಮುನ್ನ ಸರಿಪಡಿಸಿ ಎಂದು ರಸ್ತೆಯ ಲೋಕೇಷನ್ ಸಮೇತ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ಎಚ್ಚರ ವಹಿಸುತ್ತಾರಾ!?ಅಧಿಕಾರಿಗಳು ಕಾದು ನೋಡಬೇಕಾಗಿದೆ.