ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದೆ. ನಡುವೆ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ. ಸರ್ಕಾರ ದರ ನಿಗದಿಮಾಡಿದ್ದರೂ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮಿಷ್ಟದ ದರಗಳಿಗೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ.
ಇಲ್ಲಿನ ಪಂಜಾಬ್ ಪ್ರಾಂತೀಯ ರಾಜಧಾನಿ ಲಾಹೋರ್ನ ಮಾರುಕಟ್ಟೆಗಳಲ್ಲಿ ಮೊಟ್ಟೆಯ ಬೆಲೆ ಪ್ರತಿ ಡಜನ್ಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ. ಒಂದು ಮೊಟ್ಟೆಯ ಬೆಲೆ 33 ರೂ.ಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸರ್ಕಾರ ಜನರ ಮೇಲಿನ ಆರ್ಥಿಕ ದರ ಇಳಿಸಲು ಕೆಲ ವಸ್ತುಗಳಿಗೆ ನಿಗದಿತ ದರ ಸೂಚಿಸಿದೆ.
ಉದಾಹರಣೆಗೆ ಪ್ರತಿ ಕೆ.ಜಿ ಈರುಳ್ಳಿಗೆ ಸರ್ಕಾರ 175 ರೂ. ನಿಗದಿಪಡಿಸಿದ್ದರೆ, ವ್ಯಾಪಾರಿಗಳು 200 ರಿಂದ 250 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಡಜನ್ ಮೊಟ್ಟೆಯ ಬೆಲೆ 400 ರೂ. ತಲುಪಿದ್ದರೆ, ಒಂದು ಕೆಜಿ ಚಿಕನ್ ಬೆಲೆ 615 ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಕುಟುಂಬ ನಿರ್ವಹಣೆಗೂ ಕಷ್ಟಪಡುವಂತ ಸ್ಥಿತಿ ಬಂದೊದಗಿದೆ.
ಕಳೆದ ತಿಂಗಳು ಆರ್ಥಿಕ ಸಮನ್ವಯ ಸಮಿತಿ ಹಾಗೂ ರಾಷ್ಟ್ರೀಯ ಬೆಲೆ ಮೇಲ್ವಿಚಾರಣಾ ಸಮಿತಿ ಬೆಲೆ ಸ್ಥಿರತೆ ಖಚಿತಪಡಿಸಿಕೊಳ್ಳಲು ಹಾಗೂ ಲಾಭ ಕಂಡುಕೊಳ್ಳಲು ಪ್ರಾಂತೀಯ ಸರ್ಕಾರಗಳೊಂದಿಗೆ ಚರ್ಚಿಸಿ ಸಮನ್ವಯ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದವು. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಮೂಲಗಳು ತಿಳಿಸಿವೆ.