ಯುವ ಪ್ರತಿಭೆಗಗಳ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ ‘ರಣಾಕ್ಷ’. ಈ ಚಿತ್ರದ ಹಾಡುಗಳು ಹಾಗೂ ಟೀಸರ್ ಅನ್ನು ಸಾಹಿತಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ‘ನಿರ್ದೇಶಕ ರಾಘವ ನನಗೆ ಬಹಳ ವರ್ಷದ ಗೆಳೆಯರು, ನಾನು ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಕೊಂಡು ಇಲ್ಲಿಗೆ ಬಂದಿರಲಿಲ್ಲ, ಆದರೆ ಟೀಸರ್ ಹಾಗೂ ಹಾಡುಗಳನ್ನು ನೋಡಿದ ಮೇಲೆ ತಂಡದ ಶ್ರಮ ಕಾಣುತ್ತದೆ. ಈ ರಣಾಕ್ಷ ಟೈಟಲ್ಲೇ ಸ್ಟ್ರಾಂಗ್ ಇದೆ. ಮೊದಲೆಲ್ಲಾ ಸಿನಿಮಾಗಳು ಹೆಚ್ಚು ಇರಲಿಲ್ಲ, ಹಾಡುಗಳು ಕೂಡ ಕಮ್ಮಿ ಇತ್ತು, ಪದೇ ಪದೇ ಅದೇ ಹಾಡನ್ನು ಆಕಾಶವಾಣಿ ಹಾಗೂ ಸಮಾರಂಭಗಳಲ್ಲಿ ಕೇಳಿದಾಗ ಸದಾ ನೆನಪಿಗೆ ಬರುತ್ತಿತ್ತು, ಈಗ ವರ್ಷಕ್ಕೆ ಸುಮಾರು 300 ಚಿತ್ರಗಳು ಬರುತ್ತಿವೆ. ಇನ್ನು ಎಷ್ಟು ಹಾಡುಗಳು ಬಂದಿರಬೇಕು ಯೋಚಿಸಿ. ಅದರಲ್ಲೂ ಈ ಚಿತ್ರದ ಹಾಡುಗಳು ನೋಡಿದಾಗ ಬಹಳ ಖುಷಿ ಎನಿಸಿತು. ಯಾಕೆಂದರೆ ನೋಡಿದ ಮೂರು ಹಾಡುಗಳು ಹೊಸತನದ ಸದ್ದನ್ನ ಮೂಡಿಸುತ್ತದೆ. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಕೆಲಸ ಸೊಗಸಾಗಿದೆ. ಅದೇ ರೀತಿ ಗಾಯಕರಿಗೂ ಕೂಡ ಉತ್ತಮ ಭವಿಷ್ಯವಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವ ರಘು, ನಾಯಕಿಯರಾದ ರಕ್ಷಾ ಹಾಗೂ ರೋಹಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ’ ಎಂದು ಶುಭ ಕೋರಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮೋಹನ್ ರಾವ್ ನಾಲ್ವಡೆ, ರಮೇಶ್ ಗೌಡ , ಗಿರೀಶ್ ಗೌಡ, ಲಕ್ಷ್ಮಣ್ ಪಡಿಮನಿ ಸೇರಿದಂತೆ ಎಲ್ಲರೂ ಚಿತ್ರತಂಡದಕ್ಕೆ ಶುಭ ಹಾರೈಸಿದರು.
ಚಿತ್ರದ ನಿರ್ದೇಶಕ ರಾಘವ ಮಾತನಾಡುತ್ತಾ ‘ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ, ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಒಳಗೊಂಡ ಚಿತ್ರ , ಯಾವುದೇ ಮಂತ್ರ , ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ.. ಏನು.. ಎಂಬುದನ್ನು ಚಿತ್ರದಲ್ಲಿ ನೋಡಬೇಕು, ಬಹಳ ಶ್ರಮವಹಿಸಿ ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು. ನಿರ್ಮಾಪಕ ರಾಮು ಮಾತನಾಡುತ್ತಾ ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಯಾಕೆಂದರೆ ಒಂದು ಚಿತ್ರ ಮಾಡಿದರೆ ನಮಗೊಂದು ಹೆಸರು ಬರುತ್ತೆ ಅಂತ, ಈ ಚಿತ್ರವನ್ನು ನೋಡಿ ನೀವೆಲ್ಲ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ ಎಂದರು