ಬೆಂಗಳೂರು:- ಪ್ರಧಾನಿ ಮೋದಿಯನ್ನು ಚರ್ಚೆಗೆ ಕರೆದು ಸಿದ್ದು ಉದ್ಧಟತನ ತೋರಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಮತ್ತು ಪ್ರಧಾನಿಗಳನ್ನು ದೂರುವ ಪರಿಪಾಠ ಬೆಳೆಸಿಕೊಂಡಿದೆ. ಇದು ಸರಿಯಾದ ಕ್ರಮವಲ್ಲ.
ತನ್ನ ಆಡಳಿತ ವೈಫಲ್ಯ, ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಸಂಕಷ್ಟದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ನಿರಂತರವಾಗಿ ಮೋದಿ ಮೇಲೆ ವಾಗ್ದಾಳಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು. ಲೋಪವಾಗಿರುವ ಕಡೆ ಗಮನ ಹರಿಸಿ ಸರಿ ಮಾಡಿಕೊಳ್ಳಬೇಕು ಮತ್ತು ದೆಹಲಿಗೆ ಹೋಗಿ ಚರ್ಚೆ ಮಾಡಬೇಕು. ಆದರೆ ಮುಖ್ಯಮಂತ್ರಿಗಳು ಪ್ರಧಾನಿಯನ್ನು ಬಹಿರಂಗ ಚರ್ಚೆಗೆ ಕರೆಯುವುದು ಉದ್ಧಟತನದ ಪರಮಾವಧಿ. ಇದು ಸರಿಯಾದ ನಡವಳಿಕೆಯಲ್ಲ. ಪ್ರಧಾನಿಗಳನ್ನು ಚರ್ಚೆಗೆ ಕರೆಯುವ ಮುನ್ನ ತಮ್ಮಿಂದ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.
ಪದೇ ಪದೇ ಕೇಂದ್ರದ ಜತೆ ಸಂಘರ್ಷ ಸರಿಯಲ್ಲ. ಇಂತಹ ಸಂಘರ್ಷದಿಂದ ಉಪಯೋಗವೂ ಇಲ್ಲ. ಕೇಂದ್ರದ ನೆರವು ಕಡಿತ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಕೆಲ ರಾಜ್ಯಗಳಿಂದ ಮುಖ್ಯಮಂತ್ರಿಗಳು ಪಾಠ ಕಲಿಯಬೇಕಿದೆ. ಒಡಿಶಾ ರಾಜ್ಯದಲ್ಲಿ ನವೀನ್ ಪಟ್ನಾಯಕ್ ಐದು ಅವಧಿಗಳಿಂದ ಸರ್ಕಾರ ನಡೆಸುತ್ತಿದ್ದಾರೆ. ಆ ರಾಜ್ಯದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಬಡತನ ಇದೆ. ಆದರೂ ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ಸೌಹಾರ್ದತೆಯಿಂದ ಕೇಂದ್ರದಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಕೇವಲ ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.