ಬೆಂಗಳೂರು: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಎಂದು ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಬೇಕು.
ಇದೇ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನ ನಿಲುವನ್ನ ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ರಾವಣನ ಸಹೋದರ ವಿಭೀಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್ನಲ್ಲಿ ರಾಮಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ವಿಭೀಷಣನ ಮನಸ್ಥಿತಿಯ ಕಾಂಗ್ರೆಸ್ನವರು ಪಕ್ಷ ತೊರೆದು ಬರುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ, ಗೋಧ್ರಾ ರೀತಿಯ ಘಟನೆ ಆಗಬಹುದು ಎಂಬ ಹೇಳಿಕೆ ಬಗ್ಗೆ ಅವರು ಪೊಲಿಸರಿಗೆ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ, ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.