ಬೆಂಗಳೂರು:- ಬಿಜೆಪಿ ನಾಯಕರ ಫೋಟೋ ಬಳಸಿ ಪೋಸ್ಟ್ ಹಿನ್ನೆಲೆ ಕಾಂಗ್ರೆಸ್, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ದೂರು ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಫೇಸ್ಬುಕ್ ಹ್ಯಾಂಡ್ಲರ್ ವಿರುದ್ಧ ಕೋರ್ಟ್ನಲ್ಲಿ ದೂರು ದಾಖಲು ಮಾಡಲಾಗಿದೆ. ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ಐಪಿಸಿ ಸೆಕ್ಷನ್ 153ಎ, 464, 504 ಮತ್ತು 505(ಬಿ)ರಡಿ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿತ್ತು. ಈ ವೇಳೆ ಬಿಜೆಪಿ ನಾಯಕರು ನಾನು ಕರಸೇವಕ ನನ್ನನ್ನೂ ಬಂಧಿಸಿ ಅಭಿಯಾನ ಮಾಡಿದ್ದರು. ಈ ಅಭಿಯಾನವನ್ನು ಕಾಂಗ್ರೆಸ್ ಲೇವಡಿ ಮಾಡಿದ್ದಲ್ಲದೇ ಬಿಜೆಪಿ ನಾಯಕರ ಪೋಟೋಗಳನ್ನು ಬಳಸಿ ವ್ಯಂಗ್ಯವಾಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿಟಿ ರವಿ ಮತ್ತು ಶಾಸಕ ಸುನಿಲ್ ಕುಮಾರ್ ಅವರ ನಾಯಕರ ಫೋಟೋಗಳನ್ನು ತಿರುಚಿ ಸುಳ್ಳು ಮತ್ತು ಕಪೋಲಕಲ್ಪಿತ ಹೇಳಿಕೆಗಳನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು.