ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರ ಸೇರಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 98,43,577 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2024 ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
ಅದರಂತೆ ಅಂತಿಮ ಮತದಾರರ ಪಟ್ಟಿಯಲ್ಲಿ 50,78,525 ಪುರುಷ ಮತದಾರರರು, 47,63,268 ಮಹಿಳಾ ಮತದಾರರು ಹಾಗೂ 1,784 ಇತರೆ ಮತದಾರರು ಸೇರಿ ಒಟ್ಟು 98,43,577 ಮತದಾರರಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಬರುವ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರದ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ಎಲ್ಲಾ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿರುತ್ತದೆ. ಮತದಾರರು ತಮ್ಮ ಮತದಾರರ ಮಾಹಿತಿಯನ್ನು (ಹೆಸರು, ತಂದೆಯ ಹೆಸರು, ಸಂಬAಧ, ಲಿಂಗ, ಜನ್ಮ ದಿನಾಂಕ ವಿಳಾಸ ಮತ್ತು ಪೋಟೊ) ಪರಿಶೀಲಿಸಿಕೊಂಡು ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ ರವರ www.ceokarnataka.kar.nic.in ಮತ್ತು ಬಿಬಿಎಂಪಿ www.bbmp.gov.in ವೆಬ್ಸೈಟ್ ನಲ್ಲಿ ಸಹ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲಾಗುವುದು ಎಂದರು.
ಸಾರ್ವಜನಿಕರು/ಮತದಾರರು ಮತದಾರರ ಪಟ್ಟಿ ಕಾರ್ಯ ಚಟುವಟಿಕೆಗಳ ಲಾಭವನ್ನು ಪಡೆದುಕೊಂಡು ಯಾವುದೇ ಕಛೇರಿಗೆ ಹೋಗದೆ ಅವರಿರುವ ಸ್ಥಳದಿಂದಲೆ Web Portal-Voters.eci.gov.in, Voter Helpline Mobile App ಹಾಗೂ 1950 Voter Helpline ಮುಖಾಂತರ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಆಗಿರುವ ತಪ್ಪುಗಳಿಗೆ ಸಂಬAಧಪಟ್ಟ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ದಯಾನಂದ, ಸ್ನೇಹಲ್, ವಿನೋತ್ ಪ್ರಿಯಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.