ಇಂದು ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಸಕುಟುಂಬ ಸಮೇತನಾಗಿರುವ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡು ಮಾತಾಡಿದ ಸಿಎಂ ಸಿದ್ದರಾಮಯ್ಯ .
ಶ್ರೀರಾಮ ಸಮಾಜಮುಖಿ ಆಗಿದ್ದರು. ಒಬ್ಬ ಮಡಿವಾಳನ ಮಾತಿಗೂ ಬೆಲೆ ಕೊಟ್ಟರು. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೋದರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವರೆಲ್ಲಾ ಸಕುಟುಂಬಸ್ಥರು. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಆಶಯ ಶ್ರೀರಾಮನ ಆದರ್ಶ ಮತ್ತು ವ್ಯಕ್ತಿತ್ವದಲ್ಲಿದೆ. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು ಎನ್ನುವುದೇ ರಾಮಾಯಣ, ಮಹಾಭಾರತದ ಸಂದೇಶ ಎಂದರು.
ಪರಿಶಿಷ್ಠ ಪಂಗಡ ಸಮುದಾಯದ ವಾಲ್ಮೀಕಿ ಅವರು ರಾಮಾಯಣವನ್ನು ಬರೆದು ವಿಶ್ವಕ್ಕೆ ಕೊಟ್ಟರು. ದೇವರು ನಮ್ಮ ಆತ್ಮ ಮತ್ತು ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣನವರು ನುಡಿದರು. ದೇಹವೇ ದೇಗುಲ ಎನ್ನುವ ಸಂದೇಶವನ್ನು ಮನುಷ್ಯ ಪ್ರಪಂಚಕ್ಕೆ ನೀಡಿದ್ದಾರೆ. ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸ್ವತ್ತು. ಜೈ ಶ್ರೀರಾಮ್ ಎಂದು ಘೋಷಣೆ ಮೂಲಕ ನನ್ನ ಮಾತು ಮುಗಿಸುತ್ತೇನೆ ಎಂದರು ಸಿದ್ದರಾಮಯ್ಯ.