ಬೆಂಗಳೂರು:- ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ನಿನ್ನೆ ಕರ್ನಾಟಕದೆಲ್ಲೆಡೆ ಸಂಭ್ರಮ ಮನೆ ಮಾಡಿತ್ತು
ಕರ್ನಾಟಕದಲ್ಲಿ ಪ್ರತಿ ಹಿಂದೂವಿನ ಮನೆಮನೆಗಳಲ್ಲೂ ದೀಪಗಳನ್ನು ಬೆಳಗಿಸಲಾಗುತ್ತಿದೆ. ಸಾರ್ವಜನಿಕ ಸ್ಥಳ, ರಸ್ತೆ ಬದಿ, ದೇವಸ್ಥಾನ, ಮಠ, ಮಂದಿರಗಳಲ್ಲೂ ದೀಪಗಳನ್ನು ಬೆಳಗಿಸಲಾಗಿದೆ.
ರಾಯಚೂರಿನ ಮಂತ್ರಾಲಯದ ರಾಯರ ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ದೀಪೋತ್ಸವ ಆಚರಿಸಲಾಯಿತು. ಮಠದ ಪ್ರಾಂಗಣದಲ್ಲಿ ಶ್ರೀಗಳು ದೀಪ ಬೆಳಗಿಸಿದರು. ಮಂತ್ರಾಲಯದ ದೀಪೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ಸಂಭ್ರಮಿಸಿದರು.
ಅಲ್ಲದೆ, ರಾಯಚೂರಿನ ಶ್ರೀರಾಮನಗರದ ಕೋದಂಡರಾಮ ದೇವಾಲಯದಲ್ಲೂ ದೀಪೋತ್ಸವ ಆಚರಿಸಲಾಯಿತು. ಐದು ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ರಾಮೋತ್ಸವ ಆಚರಣೆ ಮಾಡಲಾಯಿತು. ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಕೋದಂಡರಾಮ ದೇಗುಲದಲ್ಲಿ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ರಾಮನ ಬಂಟ ಹನುಮನ ಜನ್ಮಸ್ಥಳದಲ್ಲೂ ದಿಪೋತ್ಸವ ಆಚರಿಸಲಾಯಿತು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅರುಣಾ ಲಕ್ಷ್ಮಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಸಾವಿರಾರು ದೀಪಗಳನ್ನ ಬೆಳಗಿಸಿ ದೀಪೋತ್ಸವ ಆಚರಿಸಲಾಯಿತು. ಬೆಟ್ಟದ ಕೆಳಗೆ ಇರುವ ಆಂಜನೇಯ ಮೂರ್ತಿಗೆ ದೀಪ ಬೆಳಗಿಸಿ ರೆಡ್ಡಿ ದಂಪತಿ ದೀಪೋತ್ಸವ ಆಚರಿಸಿದರು.
ರಾಮಮಂದಿರ ಪ್ರತಿಷ್ಠಾಪನೆ ಪ್ರಯುಕ್ತ ಶಿವಮೊಗ್ಗದ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ ಅದ್ದೂರಿಯಾಗಿ ತುಂಗಾ ಆರತಿ ನಡೆಯಿತು. ಮಾಧವ ದೇವರ ದೇವಸ್ಥಾನದ ಉತ್ಸವದ ಜೊತೆಗೆ ತುಂಗಾ ನದಿಯ ಎರಡೂ ತಟದಲ್ಲಿ ಆರತಿ ಬೆಳಗಲಾಯಿತು. ತುಂಗಾ ಆರತಿ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾದರು.