ನಿದ್ರೆ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್, ಲ್ಯಾಪ್ಟಾಪ್ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.
50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ 6 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ , ಮಧುಮೇಹ ಮತ್ತು ಕ್ಯಾನ್ಸರ್ನಂತಹ ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಕಡಿಮೆ ನಿದ್ದೆ ಮಾಡುವವರು ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಶೀತ, ಜ್ವರ, ಸುಸ್ತು, ಆಯಾಸ, ಮುಂತಾದ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಬರಬಹುದು. ಕಡಿಮೆ ನಿದ್ರೆಯ ಪರಿಣಾಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇಲ್ಲಿ 6 ಗಂಟೆಗಿಂತಲೂ ಕಡಿಮೆ ನಿದ್ರೆಯ ದೇಹಕ್ಕೆ ಏನೇನು ಸಮಸ್ಯೆ ತಂದೊಡ್ಡಬಹುದು ಎಂದು ತಿಳಿಸಲಾಗಿದೆ.
ಒತ್ತಡ: ನೀವು 6 ಗಂಟೆಗಿಂತಲೂ ಕಡಿಮೆ ಅವಧಿ ನಿದ್ದೆ ಮಾಡಿದರೆ ಅದರಿಂದ ನಿಮ್ಮ ಮಾನಸಿಕ ಸ್ಥಿತಿಯು ಕ್ಷೀಣಿಸಲು ಆರಂಭವಾಗುತ್ತದೆ. ನೀವು ಒತ್ತಡಕ್ಕೆ ಒಳಗಾಗುವುದು ಹೆಚ್ಚುತ್ತದೆ. ಕೆಲವೊಮ್ಮೆ ಒತ್ತಡ ಅತಿಯಾಗಿ, ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ನಿದ್ರಾಹೀನತೆ ಹಾಗೂ ಖಿನ್ನತೆಯ ನಡುವೆ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಖಿನ್ನತೆ ಇದ್ದರೆ ನಿದ್ದೆ ಬರುವುದಿಲ್ಲ ಹಾಗೂ ನಿದ್ದೆ ಮಾಡದಿದ್ದರೆ ಖಿನ್ನತೆ ಉಂಟಾಗುತ್ತದೆ. ಆದ್ದರಿಂದ ಪೂರ್ಣ 8 ಗಂಟೆಗಳ ನಿದ್ದೆ ಮಾಡಲು ಪ್ರಯತ್ನಿಸಿ.
ಸ್ಮರಣ ಶಕ್ತಿಯ ಸಮಸ್ತೆ: 6 ಗಂಟೆ ಅಥವಾ ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡುವವರು ಸ್ಮರಣ ಶಕ್ತಿಯ ಸಮಸ್ಯೆ ಹೊಂದಿರುವ ಸಾಧ್ಯತೆ ಇದೆ. ಅಂಥವರಿಗೆ ಆತಂಕವೂ ಹೆಚ್ಚಾಗಿರುತ್ತದೆ. ನಿದ್ರಾಹೀನತೆಯ ಸಮಸ್ಯೆ ಇದ್ದರೆ, ವೈದ್ಯರ ಬಳಿಗೆ ಹೋಗುವುದು ಒಳ್ಳೆಯದು. ಅಥವಾ ಮನೆಯಲ್ಲೇ ಕೆಲವು ಪರಿಹಾರ ಕ್ರಮಗಳನ್ನು ಗುರುತಿಸಿ, ಅದನ್ನು ಅಳವಡಿಸಿ ಸೂಕ್ತ ಅವಧಿಯ ನಿದ್ದೆ ಮಾಡುವುದು ಉತ್ತಮ.
ಏಕಾಗ್ರತೆಯ ಕೊರತೆ: ನಿದ್ರೆಯ ಕೊರತೆ ಅಥವಾ ನಿದ್ರಾಹೀನತೆ ಇರುವವರು ಕಡಿಮೆ ಏಕಾಗ್ರತೆ ಹೊಂದಿರುವ ಸಾಧ್ಯತೆ ಹೆಚ್ಚು. ಅಂಥವರಲ್ಲಿ ಏಕಾಗ್ರತೆಯು ದುರ್ಬಲವಾಗಿರುತ್ತದೆ. ಅವರು ಎಷ್ಟೇ ಬಯಸಿದರೂ ಅವರು ಯಾವುದೇ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯ ಆಗುವುದಿಲ್ಲ.
ನೀವು ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕ ತಾಪಮಾನದಲ್ಲಿರಬೇಕು. ರಾತ್ರಿ ಹೊತ್ತು ಅತಿಯಾಗಿ ಊಟ ಸೇವಿಸುವುದು ಸರಿಯಲ್ಲ. ಹಗಲಿನಲ್ಲಿ ವ್ಯಾಯಾಮ, ದೈಹಿಕ ಶ್ರಮ ಹಾಕಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು