ಬೆಂಗಳೂರು: ಬೆಳ್ಳಂ ಬೆಳಗ್ಗೆ ಗೋವಾದಿಂದ ನಗರಕ್ಕೆ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ 50 ಲಕ್ಷ ಮೌಲ್ಯದ 16 ಸಾವಿರ ಮದ್ಯದ ಬಾಟೆಲ್ ಗಳನ್ನ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ.
ಗೋವಾದಿಂದ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ಮದ್ಯ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಮಹದೇವಪುರ ಹಾಗೂ ಕೆ.ಆರ್.ಪುರ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು 50 ಲಕ್ಷ ಮೌಲ್ಯದ 370 ಬಾಕ್ಸ್ ನಲ್ಲಿದ್ದ 16 ಸಾವಿರ ಮದ್ಯದ ಬಾಟೆಲ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾದಿಂದ ಬೆಳಗಾವಿ ಮಾರ್ಗವಾಗಿ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದ ಚಾಲಕ ಅಮಿತ್ ಹಾಗೂ ಪರಮೇಶ್ ಎಂಬುವರನ್ನ ಬಂಧಿಸಲಾಗಿದೆ.ಗೋವಾದಿಂದ ನಗರಕ್ಕೆ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು.
ಕಳೆದ 15 ದಿನಗಳಿಂದ ಅಬಕಾರಿ ಇಲಾಖೆಯ ಡಿಸಿ ವೀರಣ್ಣ ಬಾಗೇವಾಡಿ, ಡಿವೈಎಸ್ಪಿ ಮುಜಾವರ್ ಅಬೂಬಕರ್ ನೇತೃತ್ವದ ತಂಡ ರಚಿಸಲಾಗಿತ್ತು. ಇಂದು ಮುಂಜಾನೆ ಹೊಸಕೋಟೆಗೆ ಕಡೆ ಮಾಲ್ ಸಾಗಿಸುವ ಬಗ್ಗೆ ಮಾಹಿತಿ ಲಭ್ಯ ಹಿನ್ನೆಲೆ ಇಂದು ಕೆ.ಆರ್.ಪುರದಲ್ಲಿ ವಾಹನ ತಡೆಗಟ್ಟಿ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ರಾಯಲ್ ಸ್ಟಾಗ್ ಹಾಗೂ ಲೈಟ್ ಹೌಸ್ ಹೆಸರಿನ ಮದ್ಯ ಬಾಟಲಿಗಳನ್ನ ಸರಬರಾಜು ಮಾಡುತ್ತಿದ್ರು
ಮೆಲ್ನೋಟಕ್ಕೆ ನಕಲಿ ಮದ್ಯ ಎಂಬುವುದು ತಿಳಿದುಬಂದಿದೆ. ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ ಅಸಲು ಅಥವಾ ನಕಲು ಎಂಬುದರ ಬಗ್ಗೆ ನಿಖರವಾಗಿ ಗೊತ್ತಾಗಲಿದೆ ಎಂದು ಅಬಕಾರಿ ಇಲಾಖೆಯ ದಕ್ಷಿಣ ವಿಭಾಗದ ಜಂಟಿ ಅಯುಕ್ತ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮದ್ಯ ಬಾಟಲಿಗಳನ್ನ ನ್ಯಾಷನಲ್ ಡಿಸ್ಟ್ರಿಲರಿ ಕಂಪೆನಿಯಿಂದ ವಿತರಣೆ ಮಾಡಿರುವುದಾಗಿ ಮದ್ಯ ಬಾಕ್ಸ್ ಗಳ ಮೇಲೆ ಹೆಸರು ನಮೂದಿಸಲಾಗಿದ್ದು ಅಸಲಿ ಈ ಹೆಸರಿನಲ್ಲಿ ಕಂಪೆನಿವಿದೆಯಾ ಎಂಬುದರ ಬಗ್ಗೆ ಗೋವಾಕ್ಕೆ ತೆರಳಿ ಪರಿಶೀಲಿಸಲಾಗುವುದು. ಅಲ್ಲದೆ ಬಾಟಲಿಗಳ ಮೇಲೆ ಬ್ರ್ಯಾಂಡ್ ಹೆಸರು ಸಹ ನಕಲಿಯಾಗಿರುವ ಸಾಧ್ಯತೆಯಿದೆ.
ಆರೋಪಿಗಳು ಗೋವಾದಿಂದ ಬೆಳಗಾವಿ ಮಾರ್ಗವಾಗಿ ನಗರಕ್ಕೆ ಇಂದು ಬೆಳಗ್ಗೆ ಬಂದಿದ್ದು ಹೊಸಕೋಟೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು, ನಿಖರವಾಗಿ ಯಾರಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಸಬೇಕಿದೆ.