ಕಾಬೂಲ್: ರಷ್ಯಾದ ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕ ವಿಮಾನವೊಂದು ಅಫ್ಘಾನಿಸ್ತಾನದ ಉತ್ತರ ಭಾಗದ ಬಡಾಖ್ಷಾನ್ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ಆಫ್ಘನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಇದು ಭಾರತಕ್ಕೆ ಸೇರಿದ ವಿಮಾನ ಅಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
“ಅಫ್ಘಾನಿಸ್ತಾನದಲ್ಲಿ ಈಗಷ್ಟೇ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು, ಭಾರತದ ಪ್ರಯಾಣಿಕ ವಿಮಾನವಲ್ಲ, ಹಾಗೆಯೇ ನಿಗದಿತವಲ್ಲದ (ಎನ್ಎಸ್ಒಪಿ)/ ಚಾರ್ಟರ್ಡ್ ವಿಮಾನ ಕೂಡ ಅಲ್ಲ. ಅದು ಮೊರೊಕ್ಕಾ ನೋಂದಾಯಿತ ಸಣ್ಣ ವಿಮಾನ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯ ವಿವರಣೆ ಕೊಟ್ಟಿದೆ.
ಬಡಾಖ್ಷಾನ್ನ ಕುರನ್- ಮುಂಜಾನ್ ಮತ್ತು ಜಿಬಾಕ್ ಜಿಲ್ಲೆಗಳ ನಡುವಿನ ತೋಪ್ಖಾನಾ ಎಂಬ ಪ್ರದೇಶದಲ್ಲಿನ ಪರ್ವತ ಭಾಗದಲ್ಲಿ ವಿಮಾನ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಇದು ಭಾರತದ ಪ್ರಯಾಣಿಕ ವಿಮಾನ ಎಂದು ಬಡಾಖ್ಷಾನ್ನ ಮಾಹಿತಿ ಹಾಗೂ ಸಂಸ್ಕೃತಿ ಇಲಾಖೆಯ ಮುಖ್ಯಸ್ಥ ಜಬೀಯುಲ್ಲಾ ಅಮಿರಿ ಹೇಳಿದ್ದಾಗಿ ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವರದಿ ಮಾಡಿತ್ತು. ಇದು ದಿಲ್ಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ಪ್ರಯಾಣಿಕ ವಿಮಾನ ಎನ್ನಲಾಗಿತ್ತು.
ಇದು ಭಾರತದ ವಿಮಾನ ಅಲ್ಲ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಖಚಿತಪಡಿಸಿದೆ. ಬಡಾಖ್ಷಾನ್ ಪ್ರಾಂತ್ಯದ ಕುರನ್- ಮಂಜಾನ್ ಹಾಗೂ ಜಿಬಾಕ್ ಜಿಲ್ಲೆಗಳ ಉದ್ದಕ್ಕೂ ಇರುವ ತೋಪಖಾನಾ ಪರ್ವತ ಭಾಗದಲ್ಲಿ ಅಪಘಾತಕ್ಕೆ ಒಳಗಾದ ವಿಮಾನವು ಮೊರೊಕ್ಕಾನ್ ನೋಂದಾಯಿತ ಡಿಎಫ್ 10 ವಿಮಾನ ಎಂದು ಡಿಜಿಸಿಎದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.