ಬೆಂಗಳೂರು: ಕಾಂಗ್ರೆಸ್ಸಿಗರು ಬಾಬರ್ ಸಂತತಿಯನ್ನು ಪ್ರೀತಿಸಿದಷ್ಟು ಅವರಪ್ಪನನ್ನು ಪ್ರೀತಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕ ಬೀಜಾಂಕುರ ಆಗಿದೆ. ಬಾಬರ್ ಮತ್ತು ಅವನ ಸಂತಾನ ಓಲೈಸುವವರಿಗೂ ವೋಟ್ ಬ್ಯಾಂಕ್ ರಾಜಕೀಯದ ಅನಿವಾರ್ಯತೆ ಉಂಟಾಗಿದೆ. ರಾಮನನ್ನು ಬಿಟ್ಟರೆ ರಾಷ್ಟ್ರ ಇಲ್ಲ, ವೋಟ್ ಇಲ್ಲ ಎನ್ನುವುದು ಗೊತ್ತಾಗಿದೆ.
ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ಕೂಡ ನಮಗೆ ಪವಿತ್ರ. ಜ್ಞಾನ ವಾಪಿಯಲ್ಲಿನ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ. ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಲು ಅವಕಾಶ ಇದೆ ಎಂದರು.
ನಾನು ದೇವಸ್ಥಾನಕ್ಕೆ ಹೋಗಲ್ಲ, ಸಂವಿಧಾನ ಮುಖ್ಯ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಸಂವಿಧಾನ ನಮಗೂ ಮುಖ್ಯ. ಅದರ ಮೊದಲ ಪುಟದಲ್ಲೇ ರಾಮ ಇದ್ದಾನೆ. ಡಿಕೆಶಿ ರಾಮ ಯಾರಪ್ಪನ ಸ್ವತ್ತೂ ಅಲ್ಲ ಎನ್ನುತ್ತಾರೆ. ರಾಮನನ್ನು ಯಾರ ಅಪ್ಪನ ಸ್ವತ್ತು ಮಾಡಲು ಸಾಧ್ಯವಿಲ್ಲ, ಒಪ್ಪುತ್ತೇವೆ. ಕಾಂಗ್ರೆಸಿಗರು ಬಾಬರ್ ಮತ್ತು ಅವನ ಸಂತಾನವನ್ನು ಅಪ್ಪನಿಗಿಂತ ಜಾಸ್ತಿ ಹೊತ್ತುಕೊಂಡಿದ್ದಾರೆ. ಬಾಬರ್ ಸಂತಾನವನ್ನು ಪ್ರೀತಿಸಿದಷ್ಟು ಅವರ ಅಪ್ಪನನ್ನು ಪ್ರೀತಿಸುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರೋದು ಡೌಟ್ ಎಂದಿರುವ ವೀರಪ್ಪ ಮೊಯ್ಲಿಗೆ ತೀಕ್ಷ್ಣವಾಗಿ ಕುಟುಕಿರುವ ರವಿ, ನಮಗೆ ವೀರಪ್ಪ ಮೊಯ್ಲಿಯ ಸರ್ಟಿಫಿಕೇಟ್ ಅವಶ್ಯಕತೆ ಇದೆಯಾ? ಎಂದರು.